ಅಯೋಧ್ಯೆ ರಾಮ ಮಂದಿರದ ಫೋಟೋ ತಿರುಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಯುವಕನಿಗೆ ಜೈಲು

Views: 104
ಗದಗ, ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಪ್ರತಿ ಊರಿನ ಗಲ್ಲಿ ಗಲ್ಲಿಗಳಲ್ಲಿ ಶ್ರೀ ರಾಮನ ಕಟೌಟ್ ರಾರಾಜಿಸುತ್ತಿವೆ. ಎಲ್ಲಲೆಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಆದರೆ ಇಲ್ಲೊಬ್ಬ ಕಿಡಿಗೇಡಿ ರಾಮ ಮಂದಿರದ ಚಿತ್ರವನ್ನು ತಿರುಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಜೈಲು ಸೇರಿದ್ದಾನೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್ ದಫೇದಾರ್ ಎಂಬ ಯುವಕನೊಬ್ಬ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭದಲ್ಲಿ ಇಂತಹ ಘಟನೆ ನಡೆದಿದೆ. ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರ ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಲಾಗಿದೆ. ಸುದ್ಧಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರ ಹಾಕಿದ್ದು ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೇದಾರ್ ಎಂಬಾತನನ್ನು ಬಂಧಿಸಿದ್ದಾರೆ.
ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ಪೊಲೀಸ್ ಠಾಣೆಗೆ ದೌಡಾಯಿಸಿ ಯುವಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪಿಎಸ್‌ಐ ಸೋಮನಗೌಡರು ಮಾಹಿತಿ ನೀಡಿದ್ದಾರೆ.