ಅಯೋಧ್ಯೆ ಮಂಡಲ ಪೂಜೆ ಮುಗಿಸಿ ಉಡುಪಿಗೆ ಆಗಮಿಸಿದ ಪೇಜಾವರ ಶ್ರೀಗಳಿಗೆ ಅದ್ದೂರಿ ಸ್ವಾಗತ

Views: 28
ಉಡುಪಿ: ಅಯೋಧ್ಯೆಯಲ್ಲಿ ರಾಮ ದೇವರಿಗೆ ಪ್ರಾಣ ಪ್ರತಿಷ್ಠೆ, ಮಂಡಲ ಪೂಜೆ ಮುಗಿಸಿ ಬಂದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರನ್ನು ನೂರಾರು ನಾಗರಿಕರು ವೈಭವದಿಂದ ಸ್ವಾಗತಿಸಿದರು.
48 ದಿನಗಳ ಕಾಲ ಅಲ್ಲೇ ಇದ್ದು, ರಾಮದೇವರ ಪೂಜೆ ಸಹಿತ ಮಂಡಲ ಪೂಜೆ ಮುಗಿಸಿ ಬಂದಿರುವ ವಿಶ್ವ ಪ್ರಸನ್ನತೀರ್ಥರನ್ನು, ತವರು ನೆಲದಲ್ಲಿ ರವಿವಾರ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ನೂರಾರು ರಾಮಭಕ್ತರು ಬೈಕ್ ರ್‍ಯಾಲಿ ಮೂಲಕ ಅವರನ್ನು ಸ್ವಾಗತಿಸಿದರು. ಜಿಲ್ಲೆಯ ಗಡಿಭಾಗ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಗಳನ್ನು ಗೌರವಿಸಲಾಯಿತು. ಬಳಿಕ ಉಡುಪಿಯ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಉಡುಪಿಗೆ ಬಂದ ಶ್ರೀಗಳು ಕೃಷ್ಣದೇವರನ್ನು ಕಂಡು, ತಮ್ಮ ರಾಮ ಸೇವೆಯನ್ನು ಕೃಷ್ಣಾರ್ಪಣ ಗೊಳಿಸಿದರು.
ರಥ ಬೀದಿಯ ಚಂದ್ರೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಇದು ತನ್ನ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು ಹಾಗೂ ನಾಡಿನ ಸಂತರು ಕೊಟ್ಟ ಸೌಭಾಗ್ಯ! ಉಡುಪಿಯ ಆಂಜನೇಯನ ಸ್ಪೂರ್ತಿಯಿಂದ ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯಾಗಿದೆ. ಮಥುರಾ ಕ್ಷೇತ್ರದ ವಿಮುಕ್ತಿಯ ಕನಸು ಕೂಡ ಅದೆಷ್ಟು ಬೇಗ ನನಸಾಗಲಿ ಎಂದು ಆಶಿಸಿದರು.
ಪರ್ಯಾಯ ಪೀಠಸ್ಥರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಪೇಜಾವರ ಶ್ರೀಗಳನ್ನು ಸನ್ಮಾನಿಸಿದರು. ಅಯೋಧ್ಯೆಯಿಂದ ತಂದಿರುವ ಆಂಜನೇಯ ದೇವರ ಪ್ರೇರಣೆಯಿಂದಲೇ ಉಡುಪಿಯಲ್ಲಿ ಅನೇಕ ಪವಾಡಗಳು ನಡೆಯುತ್ತಿದೆ. ತಾಲಾ ಖೋಲೋ ಅಭಿಯಾನ ಹಾಗೂ ರಾಮಮಂದಿರ ನಿರ್ಮಾಣದ ಕನಸು ಕಟ್ಟಿದ್ದು ಉಡುಪಿಯಲ್ಲೇ. ಆಂಜನೇಯ ದೇವರು ಕನ್ನಡಿಗರಾಗಿದ್ದು, ರಾಮಮಂದಿರದ ಕನಸು ನನಸಾಗುವಲ್ಲಿ ಹನುಮಂತನ ಪ್ರೇರಣೆ ಮಹತ್ವದ್ದಾಗಿದೆ. ಹಾಗಾಗಿ ರಾಮ ಸೇವೆ ಮಾಡಿ ಬಂದ ಪೇಜಾವರ ಶ್ರೀಗಳನ್ನು ಅಭಿನವ ಆಂಜನೇಯ ಬಿರುದು ಕೊಟ್ಟು ಸನ್ಮಾನಿಸುತ್ತಿರುವುದಾಗಿ ಹೇಳಿದರು. ಹೈಕೋರ್ಟ್ ತೀರ್ಪು ಬಂದ ನಂತರ ಜೈಲಿನಲ್ಲಿ ಬಂದಿಯಾಗಿದ್ದ ರಾಮ ಲಲ್ಲಾನನ್ನು ತಾನೇ ಬೀಗ ಒಡೆದು ಹೊರತಂದು ಪೂಜೆಗೆ ಅನುವು ಮಾಡಿಕೊಟ್ಟ ದಿನವನ್ನು ಸ್ಮರಿಸಿದರು.
ಉಡುಪಿಯ ಮಠಗಳು ಸೇರಿದಂತೆ ನೂರಾರು ಅಭಿಮಾನಿಗಳು ಸಂಘಟನೆಗಳು ಪೇಜಾವರ ಶ್ರೀಗಳನ್ನು ಇದೇ ವೇಳೆ ಗೌರವಿಸಿದರು.