ಇತರೆ

ಮಗಳ ಮನೆಗೆ ಬಂದಿದ್ದ ವೃದ್ಧೆಯ ಕಿವಿಯನ್ನು ಕತ್ತರಿಸಿ ಆಭರಣ ಅಪಹರಿಸಿ ವೃದ್ಧೆಯ ಭೀಕರ ಕೊಲೆ

Views: 74

ಕನ್ನಡ ಕರಾವಳಿ ಸುದ್ದಿ: ಮಗಳ ಮನೆಗೆ ಬಂದಿದ್ದ ವೃದ್ಧೆ ಕಳೆದ ಒಂದೂವರೆ ವರ್ಷದಿಂದ ಅಲ್ಲೇ ವಾಸವಾಗಿದ್ದರು. ಕೆಲಸದ ನಿಮಿತ್ತ ಕುಟುಂಬಸ್ಥರು ಮನೆಯಿಂದ ಹೊರಗೆ ಹೋಗುತ್ತಿದ್ದರಿಂದ, ಮನೆಯಲ್ಲಿ ವೃದ್ಧೆಯೊಬ್ಬರೇ ಇರುತ್ತಿದ್ದರು. ಇದೇ ಸಮಯವನ್ನು ಬಳಸಿಕೊಂಡು ಹಂತಕರು ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿವಿಯೊಲೆಗಾಗಿ ಆಕೆಯ ಕಿವಿಯನ್ನೇ ಕತ್ತರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವನಪುರ ಗ್ರಾಮದಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದು, ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ‌ ಕೆಳಗಿನಜೂಗಾನಹಳ್ಳಿ ಗ್ರಾಮದ ಸುಬ್ಬಮ್ಮ (80) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದೂವರೆ ವರ್ಷದಿಂದ ತನ್ನ ಮಗಳ ಮನೆಯಾದ ಬಸವನಪುರ ಗ್ರಾಮದಲ್ಲಿ ವಾಸವಾಗಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಹಾಗೂ ಎಎಸ್ಪಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಮಯದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಸುಬ್ಬಮ್ಮ ತಮ್ಮ ಮಗಳ ಮನೆಗೆ ಬಂದಿದ್ದರು, ಮನೆಯ ಸದಸ್ಯರು ಗಾರೆ ಕೆಲಸ ಸೇರಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ವೃದ್ಧೆ ಸುಬ್ಬಮ್ಮ ಮಾತ್ರ ಇರುತ್ತಿದ್ದರು, ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕಿವಿಯೋಲೆಯೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

ಶುಕ್ರವಾರ (ಜೂ.19) ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ, ತಲೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗಿತ್ತು, ಕಿವಿಯನ್ನು ಕತ್ತರಿಸಿ ಕಿವಿಯೋಲೆಯನ್ನು ಕಳ್ಳರು ಕದ್ಯೊಯ್ದಿರುವುದು ಗೊತ್ತಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧೆಯನ್ನು ಯಲಂಹಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಜೆಯ ಸಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

Related Articles

Back to top button
error: Content is protected !!