5,8 ಮತ್ತು9ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಮುಂದುವರಿಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ

Views: 320
ಬೆಂಗಳೂರು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಮಧ್ಯದಲ್ಲೇ ತಡೆಹಿಡಿಯಲ್ಪಟ್ಟ 5,8 ಮತ್ತು9ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಮುಂದುವರಿಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದೇ ವೇಳೆ, ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ರದ್ದು ಮಾಡಿದೆ.
ರಾಜ್ಯಸರ್ಕಾರವು ಬೋರ್ಡ್ ಪರೀಕ್ಷೆಯನ್ನು ನಡೆಸಬಹುದು, ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಲ್ಲೇ ಮುಂದುವರೆಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ನಡೆಸುವ ಕುರಿತು ಸಂಬಂಧಪಟ್ಟವರ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ ತಡೆ ಕೋರಿ ಸುಪ್ರೀಂಕೋರ್ಟ್‌ನಲ್ಲೇ ಮನವಿ ಸಲ್ಲಿಸುವಂತೆ ಸೂಚಿಸಿದೆ.
ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ಸುದೀರ್ಘ ವಿಚಾರಣೆ ನಡೆಸಿದ ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್‌ಗೆ ವಿಭಾಗೀಯ ಪೀಠ ವಾದ -ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದರಿಸಿತ್ತು. ಈಗ ಬೋರ್ಡ್ ಪರೀಕ್ಷೆಗೆ ಅಸ್ತು ಎಂದಿರುವ ಜತೆಗೆ ಉಳಿದ ವಿಷಯಗಳ ಪರೀಕ್ಷೆ ನಡೆಸಲು ಸೂಕ್ತ ಮತ್ತು ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದೆ.
ಮಾ.25ರಿಂದಲೇ ಪರೀಕ್ಷೆ:
5,8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಮಾ.25ರ ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯವಾಗಿದ್ದು ಫಲಿತಾಂಶ ಹೊರ ಬರಬೇಕಿದೆ.
ಕಳೆದ ಮಾರ್ಚ್ 13ರಂದು ಸುಪ್ರೀಂಕೋರ್ಟ್ ಈ ಪರೀಕ್ಷೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿತ್ತು. ಅದರನುಸಾರವಾಗಿ ಈಗ ತೀರ್ಪು ನೀಡಲಾಗಿದೆ.
ಹೈಕೋರ್ಟ್ ಮೊರೆ:
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತಿರುವ ಈ ಪರೀಕ್ಷೆ ಮಾರ್ಚ್ 11ರಂದು ಆರಂಭಗೊಂಡು ಮಾರ್ಚ್ 18ಕ್ಕೆ ಮುಗಿಯಬೇಕಾಗಿತ್ತು. ಮಾರ್ಚ್ 12ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದಾಗ ಸರ್ಕಾರ ತಕ್ಷಣವೇ ಹೈಕೋರ್ಟ್ ಬಾಗಿಲು ತಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದ ಶಿಕ್ಷಣ ಇಲಾಖೆ ಮತ್ತು ಅಧಿಕಾರಿಗಳು ಒಂದೆರಡು ದಿನ ತಡವಾಗಿ ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಇದೀಗ ಹೈಕೋರ್ಟ್‌ನಲ್ಲಿ ಕಳೆದ ಕೆಲವು ದಿನಗಳಿಂದ ವಿಚಾರಣೆ ನಡೆಯುತ್ತಿದೆ. ಶಿಕ್ಷಣ ಇಲಾಖೆಗೆ ಪಬ್ಲಿಕ್ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಮತ್ತು ಅದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂಬ ವಾದದೊಂದಿಗೆ ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ವಾದ ಮಂಡಿಸುತ್ತಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭ ಎರಡೂ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್, ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿ ಈ ಬಗ್ಗೆ ಇಂದು ತೀರ್ಪು ನೀಡಿದೆ.
ಕಾನೂನು ಹೋರಾಟ:
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ 5,8,9 ಮತ್ತು11ನೇ ತರಗತಿಗೆ ಈ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಲು ಕಳೆದ 2023ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿದ್ದವು.
ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.
ಖಾಸಗಿ ಶಾಲೆಗಳ ಸಂಘಟನೆಯ ವಾದವನ್ನು ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ 2024ರ ಮಾರ್ಚ್ 5ರಂದು ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು. ಅಂದರೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.
ವಿಭಾಗೀಯ ಪೀಠಕ್ಕೆ:
ಪಬ್ಲಿಕ್ ಪರೀಕ್ಷೆಗೆ ತಡೆ ನೀಡಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಾರ್ಚ್ 7ರಂದು ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠವು ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಅಂದರೆ ಮಾರ್ಚ್ 11ರಂದು ಆರಂಭವಾಗುವ 5,8,9ನೇ ತರಗತಿಯ ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿದೆ ಎಂದು ತಿಳಿಸಲಾಗಿತ್ತು.
11 ತರಗತಿ ಪರೀಕ್ಷೆಗಳು ಆಗಲೇ ನಡೆದು ಮುಕ್ತಾಯವಾಗಿವೆ. 5,8,9ನೇ ತರಗತಿ ಪರೀಕ್ಷೆಗಳು ಮಾರ್ಚ್ 11ರಂದು ಆರಂಭವಾಗಿದ್ದವು.
ಸುಪ್ರೀಂಕೋರ್ಟ್ ಮೊರೆ:
ಖಾಸಗಿ ಶಿಕ್ಷಣ ಸಂಸ್ಥೆಗಳು ಯಥಾವತ್ತಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿವೆ. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಿದ ಸುಪ್ರೀಂಕೋರ್ಟ್ ಮಾರ್ಚ್ 12 ರಂದು ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿತ್ತು. ಮತ್ತು ಶಿಕ್ಷಣ ಇಲಾಖೆ ಕೂಡಾ ಎಲ್ಲಾ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿತು.
ವಿಸ್ತೃತ ಪೀಠಕ್ಕೆ ವರ್ಗ:
ಒಂದು ಕಡೆ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆಯಾಜ್ಞೆ ನೀಡಿದ ಬೆನ್ನಿಗೇ, ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ರುಪ್ಸಾ ಬೆಂಬಲಿತ ಕೆಲವು ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು. ಆದರೆ, ಒಟ್ಟಾರೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದು, ಇದು ಮಾರ್ಚ್ 14ರಂದು ನಡೆದಿತ್ತು.
ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಅವಕಾಶ ಕಲ್ಪಿಸಬಾರದು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಪೀಠ ನಡೆಸಿತು.
ಕಾಯ್ದಿರಿಸಿದ ತೀರ್ಪು:
ಹೈಕೋರ್ಟ್‌ನ ವಿಭಾಗೀಯ ಪೀಠವು ಮಾರ್ಚ್ 18ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿತ್ತು.
ಶಿಕ್ಷಣ ಇಲಾಖೆ ನಿಗದಿಪಡಿಸಿದಂತೆ ಬೋರ್ಡ್ ಎಕ್ಸಾಂ ನಡೆಸಲು ಮಾರ್ಚ್ 22ರಂದು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಚ್ 25ರಿಂದ ಪರೀಕ್ಷೆ ಮರು ಆರಂಭವಾಗಲಿದೆ.