ಸಾಂಸ್ಕೃತಿಕ

4 ತಿಂಗಳಲ್ಲಿ ನಟಿ ರನ್ಯಾರಾವ್ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಾಟ, ಸ್ಫೋಟಕ ವಿಚಾರ ಬಯಲು

Views: 41

ಕನ್ನಡ ಕರಾವಳಿ ಸುದ್ದಿ: ದುಬೈಯಿಂದ ಚಿನ್ನ ಅಕ್ರಮ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ ಕುರಿತಾದ ಒಂದೊಂದೇ ಕಳ್ಳಾಟಿಕೆ ಬಯಲಿಗೆ ಬರುತ್ತಿವೆ. ಈ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಕಂದಾಯ ಗುಪ್ತಚರ ನಿರ್ದೇಶನಾಲಯ ತನಿಖಾಧಿಕಾರಿಗಳ ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ. ಈ ವೇಳೆ 4 ತಿಂಗಳಲ್ಲಿ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬಯಲಾಗಿದೆ.

ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್ಗೆ ಕೊಟ್ಟಿದ್ದ ರನ್ಯಾ, ಅದನ್ನ ಆತನ ಮೂಲಕವೇ ಮಾರಾಟ ಮಾಡಿಸಿದ್ದಳಂತೆ. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂ.ಯನ್ನು ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.

ಕಳೆದ ನವೆಂಬರ್‌ನಿಂದ ಬರೋಬ್ಬರಿ 49.6 ಕೆಜಿ ಚಿನ್ನ ತಂದು ರನ್ಯಾ ಕೊಟ್ಟಿರುವುದಾಗಿ ಸಾಹಿಲ್‌ ಜೈನ್‌ ಒಪ್ಪಿಕೊಂಡಿದ್ದಾನೆ. ಹೀಗೆ ರನ್ಯಾ ತಂದುಕೊಟ್ಟಿದ್ದ 49.6 ಕೆಜಿ ಚಿನ್ನವನ್ನು ಮಾರಾಟ ಮಾಡಿದ್ದಾಗಿ ಸಾಹಿಲ್ ಜೈನ್ ತಿಳಿಸಿದ್ದಾನೆ. ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖರೀದಿಗೆ ಹೋಗುತ್ತಿದ್ದಳು ಎಂದಿದ್ದಾನೆ.

ಪ್ರತಿ ಹವಾಲ ವರ್ಗಾವಣೆಗೆ ಸಾಹಿಲ್‌ಗೆ 55 ಸಾವಿರ ರೂ. ಕಮಿಷನ್‌ ಸಿಗುತ್ತಿತ್ತು ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದುವರೆಗೆ ಅಧಿಕಾರಿಗಳು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು 2 ಕೆಜಿ ಚಿನ್ನದ ಆಭರಣ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ಮೂಲದ, ಸದ್ಯ ಕಬ್ಬನ್‌ಪೇಟೆಯಲ್ಲಿ ನೆಲೆಸಿರುವ ಚಿನ್ನದ ವ್ಯಾಪಾರಿ ಸಾಹಿಲ್‌ ಜೈನ್‌ 2024ರ ನವೆಂಬರ್‌ನಲ್ಲಿ ರನ್ಯಾ ಸಂಪರ್ಕಕ್ಕೆ ಬಂದಿದ್ದ. ಬಳಿಕ ರನ್ಯಾ ದುಬೈನಿಂದ ಕಳ್ಳ ಸಾಗಾಣಿಕೆ ಮೂಲಕ ತರುತ್ತಿದ್ದ ಕೆಜಿಗಟ್ಟಲೆ ಚಿನ್ನವನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಮಾ. 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಡಿಆರ್ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಳು. ಈ ವೇಳೆ ಆಕೆಯ ಬಳಿ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನ ಪತ್ತೆಯಾಗಿತ್ತು. ನಟಿ ರನ್ಯಾ ರಾವ್, ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸವಲತ್ತುಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ತನಿಖೆಯಲ್ಲಿ ಬಹಿರಂಗವಾಗಿತ್ತು.

 

Related Articles

Back to top button