18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ

Views: 52
ಕನ್ನಡ ಕರಾವಳಿ ಸುದ್ದಿ: ಅಹಮದಾಬಾದ್ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು.
ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ ಅಂತಿಮ ವರೆಗೂ ಹೋರಾಡಿತಾದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ತಂಡದ ಪರ ಶಶಾಂಕ್ ಸಿಂಗ್ (61) ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದರೂ. ಆದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಜಾಬ್ 184 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ 6 ರನ್ ಗಳಿಂದ ಸೋಲನ್ನು ಕಂಡಿತು.
ಮತ್ತೊಂದೆಡೆ 18 ವರ್ಷಗಳ ನಂತರ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಿತು. ಸತತ 18 ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಕರ್ನಾಟಕದ ಅಭಿಮಾನಿಗಳ ಕಪ್ ಕನಸನ್ನು ಆರ್‌ಸಿಬಿ ನನಸು ಮಾಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭದಲ್ಲಿ 56 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರು ಬಳಿಕ ಪುಟಿದೆದ್ದಿತು.
ವಿರಾಟ್ ಕೊಹ್ಲಿ (43), ಮಾಯಾಂಕ್ ಅಗರ್ವಾಲ್ (24), ರಜತ್ ಪಾಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಜಿತೇಶ್ ಶರ್ಮಾ (24), ಮತ್ತು ರೊಮಾರಿಯೊ ಶೆಫರ್ಡ್ (17) ಬ್ಯಾಟಿಂಗ್ ಸಹಾಯದಿಂದ 191 ರನ್ ಬಾರಿಸಿತು.
ಮತ್ತೊಂದೆಡೆ 11 ವರ್ಷಗಳ ನಂತರ ಐಪಿಎಲ್ ಫೈನಲ್ ಗೆ ತಲುಪಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಮತ್ತೊಮ್ಮೆ ನಿರಾಸೆ ಮೂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ತಂಡವು ಫೈನಲ್‌ನಲ್ಲಿ ಸೋತಿತು. ಆರ್‌ಸಿಬಿ ಪಂದ್ಯವನ್ನು ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾದರು.