ರಾಜಕೀಯ

ಸುಮಲತಾಗೆ ಬಿಜೆಪಿ ವರಿಷ್ಠರ ದಿಡೀರ್ ಬುಲಾವ್; ಕುತೂಹಲ ಕೆರಳಿಸಿದ ಕರೆ..!

Views: 99

ಸಂಸದೆ ಸುಮಲತಾ ಅಂಬರೀಶ್  ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಆಹ್ವಾನಿಸಿದ್ದು, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನದ ಮೂಲಕ ರಾಜಧಾನಿಗೆ ತೆರಳಿದ್ದಾರೆ. ಸದ್ಯ, ಬಿಜೆಪಿ ವರಿಷ್ಠರ ಕರೆ ರಾಜ್ಯ ರಾಜಕಾರಣದಲ್ಲಿ  ಭಾರೀ ಕುತೂಹಲ ಕೆರಳಿಸಿದೆ.

ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಬಿಜೆಪಿಯನ್ನು ಬೆಂಬಲಿಸಿರುವ ಸುಮಲತಾ ಅವರು ಈ ಬಾರಿ ಮಂಡ್ಯದ ಬಿಜೆಪಿ ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ತನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ

ಅಲ್ಲದೆ, ಮಂಡ್ಯದಿಂದ ಪುಟ್ಟರಾಜು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮಾತುಕತೆ ನಡೆಸಲಾಗುತ್ತಿದೆ. ಪುಟ್ಟರಾಜು ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಅಂತಿಮವಾಗಿದೆ. ಅದಾಗ್ಯೂ, ನಿಖಿಲ್ ಅಥವಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ನಾಯಕರು, ಮುಖಂಡರು ಒತ್ತಾಯಿಸುತ್ತಿದ್ದಾರೆ. ಕೊನೇ ಕ್ಷಣದಲ್ಲಿ ಪುಟ್ಟರಾಜು ಬದಲು ನಿಖಿಲ್ ಹೆಸರು ಘೋಷಣೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕುಮಾರಸ್ವಾಮಿ ಅವರೇ ಅಖಾಡಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.

ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಮತ್ತು ಮಂಡ್ಯ ಕ್ಷೇತ್ರ ಬಹುತೇಕ ತಮ್ಮ ತೆಕ್ಕೆಗೆ ಬೀಳುತ್ತಿದ್ದಂತೆ ವೈರತ್ವ ಮರೆತು ಒಂದಾಗುವ ಮುನ್ಸೂಚನೆ ನೀಡಿದ ಕುಮಾರಸ್ವಾಮಿ, ಸುಮಲತಾ ಅವರೇನು ನನ್ನ ಶತ್ರುನಾ? ಭೇಟಿ ಮಾಡುವ ಅವಶ್ಯಕತೆ ಬಂದರೆ ಅವರನ್ನು ಸಹ ಭೇಟಿಯಾಗತ್ತೇನೆ ಎಂದು ಹೇಳಿದ್ದರು. ಸುಮಲತಾ ಅಂಬರೀಶ್ ನನ್ನ ಅಕ್ಕ ಇದ್ದಂತೆ, ನಮ್ಮಿಬ್ಬರ ನಡುವಿನ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ ಎಂದು ಘೋಷಿಸಿದ್ದರು.

ಈ ನಡುವೆ, ಬಿಜೆಪಿ ಹೈಕಮಾಂಡ್ ಕರೆ ಮಾಡಿದ ಹಿನ್ನೆಲೆ ಸುಮಲತಾ ಅಂಬರೀಶ್ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸದ್ಯ, ಈ ಪ್ರಯಾಣವು ಕುತೂಹಲ ಮೂಡಿಸಿದ್ದು, ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ಸಿಗುತ್ತಾ? ಇಲ್ಲವಾ? ಅಥವಾ ಮಂಡ್ಯ ಕ್ಷೇತ್ರ ಜೆಡಿಎಸ್​ಗೆ ಬಿಟ್ಟುಕೊಟ್ಟು ಸುಮಲತಾಗೆ ಬಿಜೆಪಿಯಲ್ಲಿ ಸ್ಥಾನ ಕೊಡುತ್ತಾರಾ? ಅಥವಾ ಬೇರೆ ಕ್ಷೇತ್ರದ ಟಿಕೆಟ್ ಘೋಷಿಸುತ್ತಾರಾ? ಇತ್ಯಾದಿ ಪ್ರಶ್ನೆಗಳು ಎಲ್ಲರನ್ನು ಕಾಡಿದೆ.

Related Articles

Back to top button