“ಸಿಪಿಐ ಮಾವೋ ಝಿಂದಾಬಾದ್” ಘೋಷಣೆ ಹಾಕಿದ ನಕ್ಸಲ್ ಕಾರ್ಯಕರ್ತೆ, ಶ್ರೀಮತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Views: 84
ಕಾರ್ಕಳ: ಶಂಕಿತ ನಕ್ಸಲ್ ಕಾರ್ಯಕರ್ತೆ ಶ್ರೀಮತಿ ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಶ್ರೀಮತಿ ವಿರುದ್ಧ ಕಾರ್ಕಳದಲ್ಲಿ ಒಂದು ಪ್ರಕರಣವಿರುವುದರಿಂದ ಬಾಡಿ ವಾರೆಂಟ್ ಮೇಲೆ ಆಕೆಯನ್ನು ಕಾರ್ಕಳ ಪೊಲೀಸರು ಕೇರಳದಿಂದ ಕಾರ್ಕಳಕ್ಕೆ ಕರೆ ತಂದಿದ್ದಾರೆ. ಈಗಾಗಲೇ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿನಾಲೆ ಪ್ರದೇಶವೊಂದರಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಫೆ.13ರಂದು ರಾತ್ರಿ ಕಾರ್ಕಳ ನಗರ ಠಾಣೆ ಪೊಲೀಸರು ಕೇರಳ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಶ್ರೀಮತಿಯನ್ನು ಕರೆ ತಂದಿದ್ದಾರೆ. ಫೆ.15ರಂದು ಶ್ರೀಮತಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಫೆ.17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣ ಹಿನ್ನೆಲೆ: 2011ರ ನ.19ರಂದು ಹೆಬ್ರಿಯ ಕಬ್ಬಿನಾಲೆ ಪ್ರದೇಶದಲ್ಲಿ ನಡೆದ ಸದಾಶಿವ ಗೌಡರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಶ್ರೀಮತಿಯನ್ನು ಗುರುವಾರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರಿಪಡಿಸುವ ವೇಳೆ ಮಾಧ್ಯಮದವರನ್ನು ಕಂಡು ಸಿಪಿಐ ಮಾವೋ ಝಿಂದಾಬಾದ್ ಎಂದು ಘೋಷಣೆ ಕೂಗುತ್ತಾ ಜೈಕಾರ ಹಾಕಿದ್ದಾಳೆ. ಪೊಲೀಸ್ ಭದ್ರತೆಯ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
ಶ್ರೀಮತಿ ಕೇರಳ ಹಾಗೂ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಆರೋಪದಲ್ಲಿ 2023 ನವೆಂಬರ್‌ನಲ್ಲಿ ವಯನಾಡು ಕಣ್ಣೂರಿನಲ್ಲಿ ಅರೆಸ್ಟ್ ಮಾಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಬೇಗಾರ್ ಗ್ರಾಪಂ ಬೆಳಗೋಡುಕೊಡಿಗೆಯ ಪುಟ್ಟುಗೌಡ, ಗಿರಿಜಾ ದಂಪತಿ ಪುತ್ರಿಯಾದ ಶ್ರೀಮತಿ 2007ರಿಂದ ನಾಪತ್ತೆಯಾಗಿದ್ದು ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಕೋಡು ಚೆಕ್‌ಪೋಸ್ಟ್ ಅರಣ್ಯ ಇಲಾಖೆ ತಪಾಸಣೆ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಮತಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ.