ಸಾಂಸ್ಕೃತಿಕ

“ಶಿವದೂತೆ ಗುಳಿಗೆ” ನಾಟಕವನ್ನು ಪ್ರದರ್ಶಿಸಲು ಮಸ್ಕತ್ ಗೆ ಆಗಮಿಸಿದ ರಂಗ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್

Views: 7

video
play-sharp-fill

ತುಳುನಾಡಿನ ಹೆಸರಾಂತ ರಂಗಕರ್ಮಿ, ನಿರ್ದೇಶಕ, ನಟ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮಸ್ಕತ್ ನಲ್ಲಿ ಸುಪ್ರಸಿದ್ಧ ನಾಟಕವಾದ “ಶಿವದೂತೆ ಗುಳಿಗೆ” ಯನ್ನು ಪ್ರದರ್ಶಿಸಲು ಮಸ್ಕತ್ ಗೆ ಆಗಮಿಸಿದ್ದಾರೆ. ಅವರನ್ನು ಕರಾವಳಿ ಫ್ರೆಂಡ್ಸ್ ಮಸ್ಕತ್ ಆಯೋಜಕರಾದ ಹಿತೇಶ್ ಮಂಗಳೂರು, ಪದ್ಮಾಕರ್ ಮೆಂಡನ್ ಮತ್ತು ಶಿವಾನಂದ ಕೋಟ್ಯಾನ್ ಅವರು ಮಸ್ಕತ್ ವಿಮಾನ ನಿಲ್ದಾಣದಲ್ಲಿ ಹೂಗುಚ್ಚ ನೀಡಿ ಸ್ವಾಗತಿಸಿದರು. “ಕರಾವಳಿ ಫ್ರೆಂಡ್ಸ್ ಮಸ್ಕತ್” ಅವರು ಮಜಾನ್ ಇವೆಂಟ್ಸ್ ನ ಸಹಯೋಗದೊಂದಿಗೆ “ಶಿವದೂತೆ ಗುಳಿಗೆ” ನಾಟಕವನ್ನು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ. ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಕಲಾಸಂಗಮದ ಸುಮಾರು 28 ಕಲಾವಿದರು ಶ್ರೀ ವಿಜಯ್ ಕುಮಾರ್ ಕೊಡಿಯಾಲಬೈಲ್ ರವರ ದಕ್ಷ ನಿರ್ದೇಶನದಲ್ಲಿ ಈ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಕಾಂತಾರ ಚಲನಚಿತ್ರ “ಗುರುವ” ಖ್ಯಾತಿಯ “ಸ್ವರಾಜ್ ಶೆಟ್ಟಿ” ಗುಳಿಗನ ಪಾತ್ರದಲ್ಲಿ ಮಿಂಚಲಿದ್ದಾರೆ.

ತುಳುನಾಡಿನ ಕಲೆ ಭಾಷೆ ಸಂಸ್ಕೃತಿಯನ್ನು ತನ್ನ ಉಸಿರಾಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತ ತುಳು ಕಲಾಭಿಮಾನಿಗಳಿಗೆ ಕಳೆದ ನಾಲ್ಕು ದಶಕಗಳಿಂದ ಯಶಸ್ವಿ ನಾಟಕಗಳನ್ನು ಮತ್ತು ಚಲನಚಿತ್ರಗಳನ್ನು ನೀಡುತ್ತ ಬಂದಿರುವ ಸೃಜನಶೀಲ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ತುಳುನಾಡಿನಲ್ಲಿ ತುಂಬಾ ಪ್ರಸಿದ್ದರು. ರಂಗಭೂಮಿಯಲ್ಲಿ ತಂತ್ರಜ್ನಾನ ವನ್ನು ಬಳಸಿಕೊಂಡು ಯಶಸ್ವಿಯಾಗಿ “ಶಿವದೂತೆ ಗುಳಿಗೆ” ನಾಟಕವನ್ನು ಸುಮಾರು 500 ಕ್ಕೂ ಹೆಚ್ಚಿನ ದಾಖಲೆಯ ಪ್ರದರ್ಶನಗಳನ್ನು ನೀಡಿದ್ದಾರೆ. ನಾಟಕವು ಕರ್ನಾಟಕ, ಮುಂಬೈ, ಕೇರಳದ ಗಡಿನಾಡು, ಮತ್ತು ದುಬೈನಲ್ಲಿ ಪ್ರದರ್ಶನಗೊಂಡು, ಲಕ್ಷಾಂತರ ಜನರ ಮನಸೂರೆಗೊಂಡಿದೆ.

ಜನರು ಚಲಚಿತ್ರಗಳು, ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದೆಡೆಗೆ ಆಕರ್ಷಿತರಾದ ಬಳಿಕ ನಾಟಕಗಳ ಮೇಲಿನ ಆಸಕ್ತಿ ಕಡಿಮೆಯಾಗಿ ಅಪರೂಪಕ್ಕೂಮ್ಮೆ ತುಳುನಾಡಿನ ಕೆಲೆವೆಡೆ ನಾಟಕಗಳ ಪ್ರದರ್ಶನಗಳು ನಡೆಯುತಿದ್ದವು. ಒಟ್ಟಾರೆಯಾಗಿ ನಾಟಕಗಳ ಪ್ರದರ್ಶನ ತುಳುನಾಡಿನಾದ್ಯಾಂತ ಕಡಿಮೆಯಾಗಿದ್ದವು. ಆದರೆ ತುಳುನಾಡಿನ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತೆ ರಂಗಕ್ಕಿಳಿದಿದ್ದು ನಾಟಕವನ್ನು ಮತ್ತೆ ತಿರುಗಿ ನೋಡುವಂತೆ ಮಾಡಿದ್ದಾರೆ. ತುಳುನಾಡಿನ ಆರಾಧ್ಯ ದೈವದ ಕತೆಯನ್ನು ನಾಟಕ ರೂಪದಲ್ಲಿ ಜನರಿಗೆ ತಿಳಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ತುಳುನಾಡಿನ ಆರಾಧ್ಯ ದೈವಗಳ ಅದ್ದೂರಿಯ ನಾಟಕ ಪ್ರದರ್ಶನವಾಗುವುದು ಬಹಳ ಕಡಿಮೆ. ನಿರ್ದೇಶಕರು, ತಮ್ಮ ಸೃಜನ ಶೀಲತೆಯಿಂದ ದೈವಗಳ ಬಗ್ಗೆಯೂ ಈ ರೀತಿಯ ನಾಟಕಗಳನ್ನು ರಚಿಸಬಹುದು ಎನ್ನುವುದನ್ನ ತೋರಿಸಿ ಯಶಸ್ಸುಗಳಿಸಿರುವುದು ವಿಶೇಷ.

ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಹಿಂದೊಮ್ಮೆ “ಒರಿಯರ್ದೊರಿ ಅಸಲ್”ಎಂಬ ನಾಟಕವನ್ನು ಚಲನಚಿತ್ರವನ್ನಾಗಿಸಿ ಅಪಾರ ಯಶಸ್ಸುಗಳಿಸಿದ್ದರು. ಸೃಜನಶೀಲತೆ, ಹೊಸತನ, ಗುಣಮಟ್ಟಕ್ಕೆ ಎತ್ತಿದ ಕೈ ಎಂಬುದನ್ನು ಈ ಚಿತ್ರದ ಮೂಲಕ ನಿರೂಪಿಸಿದ ಇವರು “ಮದಿಮೆ” ಎನ್ನುವ ತುಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರು. “ಪಿಲಿ” ತುಳು ಚಲನ ಚಿತ್ರದಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸಿದ್ದರು. ಮುಂಬರುವ ಕನ್ನಡ ಮತ್ತು ತುಳು ಚಲನ ಚಿತ್ರ, ವೀರ ಕಂಬುಳ, ಬಿರ್ದ್ ದ್ ಕಂಬುಲ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ಇವರ ನಾಲ್ಕು ದಶಕಗಳ ಅವರ ವೃತ್ತಿ ಅನುಭವದಲ್ಲಿ ಹಲವಾರು ಹೊಸತನಗಳಿಗೆ ನಾಂದಿ ಹಾಡಿದ ಅವರ ಸೃಜನ ಶೀಲ ಪ್ರತಿಭೆಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಸರಕಾರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ನೀಡಿ ಇವರನ್ನು ಗೌರವಿಸಿವೆ.

ಚಿತ್ರ, ಲೇಖನ, ವರದಿ : ಪಿ.ಎಸ್.ರಂಗನಾಥ್

Related Articles

Back to top button