ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸಂಸದ ತೇಜಸ್ವಿ ಸೂರ್ಯ- ಶಿವಶ್ರೀ ಸ್ಕಂದ ಪ್ರಸಾದ್

Views: 247
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಇಂದು ಹಸೆಮಣೆ ಏರಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಅತ್ಯಾಪ್ತರು, ಕುಟುಂಬ ಸದಸ್ಯರು ಹಾಗೂ ಗಣ್ಯರ ನಡುವೆ ನಡೆದ ಆಪ್ತ ಸಮಾರಂಭದಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇಂದು ಬೆಳಗ್ಗೆ 10.45 ತುಲಾ ಲಗ್ನದಲ್ಲಿ ಶಿವಶ್ರೀ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ ಮಾಡಿದರು. ಮದುವೆಗೆ ಎರಡೂ ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಬುಧವಾರ ಸಂಜೆಯಿಂದಲೇ ತೇಜಸ್ವಿ ಸೂರ್ಯ ಮನೆಯಲ್ಲಿ ವರಪೂಜೆ ಸೇರಿದಂತೆ ಮದುವೆ ಶಾಸ್ತ್ರಗಳು ನಡೆದಿದ್ಗವು. ಇಂದು ಮಾಂಗಲ್ಯ ಧಾರಣೆ, ಕನ್ಯಾದಾನ ಶಾಸ್ತ್ರಗಳು ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿದವು. ಇಂದೇ ಶಿವಶ್ರೀ ಅವರನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಕೂಡ ನಡೆಯಲಿದೆ ಎಂದು ತಿಳಿದುಬಂದಿದೆ.
ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಮದುವೆಯ ಆರತಕ್ಷತೆ ನಡೆಯಲಿದೆ. ಈ ವೇಳೆ ರಾಜ್ಯ-ದೇಶದ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.
ಇಂದು ಮದುವೆಗೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಸಿಎನ್ ಮಂಜುನಾಥ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ವಿನಯ್ ಗುರೂಜಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ರಾಜಕೀಯ ಮತ್ತು ರಾಜಕೀಯೇತರ ಮುಖಂಡರು ಬಂದು ನವಜೋಡಿಗೆ ಆಶೀರ್ವದಿಸಿದರು.
ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಮಾರ್ಚ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿಯನ್ನು ಎರಡು ತಿಂಗಳ ಹಿಂದೆಯೇ ವಿಶ್ವವಾಣಿ ವರದಿ ಮಾಡಿತ್ತು. ಬೆಂಗಳೂರಲ್ಲಿ ನಡೆದ ಏರೋ ಶೋಗೂ ಸಹ ಭಾವೀ ಪತ್ನಿಯೊಂದಿಗೆ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದರು. ನಂತರ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು.
ತಮಿಳುನಾಡು ಮೂಲದ ಶಿವಶ್ರೀ ಅವರು ಗಾಯನದಿಂದ ಖ್ಯಾತರಾಗಿದ್ದಾರೆ. ಶಿವಶ್ರೀ ಅವರು ಭರತನಾಟ್ಯ ಕಲಾವಿದೆ ಕೂಡ ಹೌದು. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿಯನ್ನೂ ಗಳಿಸಿದ್ದಾರೆ. ಆಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ ರಾಮನ ಕುರಿತ ಗೀತೆಯನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.