ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕೇಸ್ ದಾಖಲು

Views: 83
ಉತ್ತರ ಕನ್ನಡ: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಮೇಲೆ ಪ್ರಕರಣ ದಾಖಲಾಗಿದೆ. ದ್ವೇಷ ಭಾಷಣ ಹಾಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನದ ಆರೋಪದ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲು ಮಾಡಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರು, ಬಾಬ್ರಿ ಮಸೀದಿಯಂತೆ ಹಿಂದೂ ದೇವಸ್ಥಾನಗಳ ಕುರುಹು ಇರೋ ಇತರೆ ಮಸೀದಿಗಳನ್ನು ಒಡೆಯುವ ಬಗ್ಗೆ ಮಾತನಾಡಿದ್ದರು. ಅಲ್ಲದೇ, ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ್ದರು. ಜೊತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಂತರ ಶಾಪವಿತ್ತು ಅನ್ನೋ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಸಂಸದ ಅನಂತ ಕುಮಾರ್ ಹೆಗಡೆಯವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕುಮಟಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 505 ಹಾಗೂ 153 (A)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅನಂತಕುಮಾರ್ ಹೆಗಡೆ ಹೇಳಿದ್ದೇನು?
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಗೈರಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನಂತಕುಮಾರ್ ಹೆಗಡೆ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ರಣಭೈರವ ಎದ್ದಾಗಿದೆ. ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷದ ಸೇಡು ತೀರಿಸಿಕೊಳ್ಳದಿದ್ರೆ ಇದು ಹಿಂದೂ ರಕ್ತವಲ್ಲ ಎಂದು ಹಿಂದೂ ಸಮಾಜ ಹೇಳುತ್ತದೆ. ನಮ್ಮದು ಋಣವಿಟ್ಟುಕೊಂಡಿರುವ ಸಮಾಜವಲ್ಲ, ಋಣವನ್ನು ತೀರಿಸಿಯೇ ತೀರಿಸ್ತೇವೆ. ಸಾವಿರ ವರ್ಷಗಳ ಋಣವಿದೆ ನಮಗೆ, ಅದನ್ನು ತೀರಿಸದೇ ಸುಮ್ಮನೆ ಕುಳಿತರೆ ಅದಕ್ಕೆ ಹಿಂದೂ ರಕ್ತ ಅಂತಾ ಕರಿಯೋದೆ ಇಲ್ಲ. ರಾಮಜನ್ಮಭೂಮಿಯ ಜತೆ ಮೊದಲ ಪ್ರಾರಂಭ ಶುರುವಾಗಿದೆ. ಇಡೀ ಹಿಂದೂ ಸಮಾಜವನ್ನು ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದಿದ್ದಾರೆ ಎಂದಿದ್ದರು.