ಶಿಕ್ಷಣ

ವಿದ್ಯಾರ್ಥಿನಿಯರಿಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ: ಮುಖ್ಯ ಶಿಕ್ಷಕನ ಬಂಧನ

Views: 140

ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕರೊಬ್ಬರು ವಿದ್ಯಾರ್ಥಿಯರಿಗೆ ಮೊಬೈಲ್‌ನಲ್ಲಿ ಅಸಭ್ಯ ವಿಡಿಯೊಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಬಂಧಿಸಲಾದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.

ಮುಖ್ಯ ಶಿಕ್ಷಕ ಶಾಲೆಯಲ್ಲಿನ ಹೆಣ್ಣು ಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಮೊಬೈಲ್‌ನಲ್ಲಿ ಅಸಭ್ಯ ವಿಡಿಯೊಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಪರೀಕ್ಷೆಯಲ್ಲಿ ಫೇಲ್‌ ಮಾಡುವುದಾಗಿ ಶಿಕ್ಷಕ ಬೆದರಿಕೆ ಒಡ್ಡಿದ್ದಾನೆ. ಇದರಿಂದಾಗಿ 9ರಿಂದ 12 ವರ್ಷದೊಳಗಿನ ಬಾಲಕಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಮಿಶ್ರಾ ಹೇಳಿದ್ದಾರೆ.

Related Articles

Back to top button