ರಾಜಕೀಯ

ಲೋಕ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದ ಸಚಿವರ ತಲೆದಂಡ ಹೈಕಮಾಂಡ್ ಎಚ್ಚರಿಕೆ!

Views: 45

ಬೆಂಗಳೂರು,ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದ ಸಚಿವರ ತಲೆದಂಡ ಆಗಲಿದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ಕೊಟ್ಟಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಗೆಲ್ಲಲು ಹೈಕಮಾಂಡ್ ಪ್ರತಿ ಸಚಿವರಿಗೆ ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿಯನ್ನು ನಿಭಾಯಿಸದ ಸಚಿವರ ತಲೆ ದಂಡ ಆಗಲಿದೆ ಎಂದೂ ಹೈಕಮಾಂಡ್ ತಿಳಿಸಿದೆ ಎಂದರು.ದೆಹಲಿಯಲ್ಲಿ ನಿನ್ನೆ ರಾಜ್ಯದ ಎಲ್ಲ ಸಚಿವರ ಜತೆ ವರಿಷ್ಠರು ನಡೆಸಿದ ಸಭೆಯ ಬಗ್ಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಮಾತನಾಡಿಲ್ಲ. ನಿರೀಕ್ಷಿತ ಫಲಿತಾಂಶ ಬರದಿದ್ದರೆ ಸಚಿವರ ತಲೆದಂಡ ಆಗಲಿದೆ ಎಂದರು.ಸಚಿವರುಗಳು ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಗೆಲ್ಲುವ ಕಡೆ ಚುನಾವಣೆ ಸೋತರೆ ಅದನ್ನು ಸಹಿಸಲ್ಲ, ಈ ಸೋಲನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದೆ ಎಂದರು.

ಹೈಕಮಾಂಡ್ ನೀಡಿರುವ ಈ ಎಚ್ಚರಿಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೂ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ಯಾರಿಗೆ ಇದು ಅನ್ವಯವಾಗುತ್ತೆ ಎಂಬುದು ಗೊತ್ತಿಲ್ಲ. ಸಾಮಾನ್ಯವಾಗಿ ವರಿಷ್ಠರು ಈ ಮಾತನ್ನು ಹೇಳಿದ್ದಾರೆ. ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬಹುದು ಎಂದು ಹೈಕಮಾಂಡ್ ಈ ರೀತಿ ಹೇಳಿರಬಹುದು ಎಂದರು.

ಮಾಜಿ ಸಂಸದ ಮುದ್ದಹನುಮೇಗೌಡರು ಕಾಂಗ್ರೆಸ್‌ಗೆ ಬಂದರೆ ಅದಕ್ಕೆ ನನ್ನ ವಿರೋಧವೇನಿಲ್ಲ ಎಂದು ಹೇಳಿದ ಡಾ. ಜಿ. ಪರಮೇಶ್ವರ್, ಆದರೆ ಮುದ್ದಹನುಮೇಗೌಡರು ಟಿಕೆಟ್ ಕೇಳುವ ಹಾಗಿಲ್ಲ. ಟಿಕೆಟ್ ನೀಡುವಾಗ ಮಾನದಂಡದ ಪ್ರಕಾರ ನೀಡಲಾಗುತ್ತದೆ ಎಂದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಬೇಡಿಕೆ ಬಗ್ಗೆ ಎಐಸಿಸಿ ಅಧ್ಯಕ್ಷರೇ ಸ್ಪಷ್ಟನೆ ನೀಡಿ ಸದ್ಯದ ಪರಿಸ್ಥಿತಿಯಲ್ಲಿ ಆಗಲ್ಲ ಎಂದು ಅವರು ಹೇಳಿದರು.

Related Articles

Back to top button