ಲಿಂಗ ಪರಿವರ್ತಿತ ಶಿಕ್ಷಕಿಯನ್ನು ವಜಾಗೊಳಿಸಿದ ಶಾಲೆ; ಕೇಂದ್ರ, ಗುಜರಾತ್, ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Views: 32
ಗುಜರಾತ್ ಮತ್ತು ಉತ್ತರ ಪ್ರದೇಶದ ಎರಡು ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದ ಲಿಂಗ ಪರಿವರ್ತಿತ ಮಹಿಳೆಯೊಬ್ಬರನ್ನು ಉದ್ಯೋಗದಿಂದ ಕೈಬಿಡಲಾಗಿದ್ದು, ಆಕೆ ಇದೀಗ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಆಕೆಯ ಅರ್ಜಿಯನ್ನು ಆಲಿಸಲು ಮುಖ್ಯನ್ಯಾಯಮೂರ್ತಿಗಳು ಸಮ್ಮತಿಸಿದ್ದಾರೆ.
‘ನಾವು ಏನು ಮಾಡಬಹುದು ಎಂಬುದನ್ನು ನೋಡುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವ್ಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಲಿಂಗ ಪರಿವರ್ತಿತ ಮಹಿಳೆಯ ಮನವಿಯ ಕುರಿತು ಕೇಂದ್ರ ಸರ್ಕಾರ, ಗುಜರಾತ್ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದೆ.
ಜೊತೆಗೆ, ಗುಜರಾತ್‌ನ ಜಾಮ್‌ನಗರದ ಶಾಲೆಯ ಮುಖ್ಯಸ್ಥರಿಂದ ಮತ್ತು ಉತ್ತರ ಪ್ರದೇಶದ ಖಿರಿ ಮೂಲದ ಮತ್ತೊಂದು ಖಾಸಗಿ ಶಾಲೆಯ ಅಧ್ಯಕ್ಷರಿಂದಲೂ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆಗಳನ್ನು ಕೇಳಿದೆ.
ಆಕೆಯ ಲಿಂಗ ಪರಿವರ್ತನೆ ವಿಚಾರ ಬಹಿರಂಗಗೊಂಡ ನಂತರ ಉತ್ತರ ಪ್ರದೇಶ ಮತ್ತು ಗುಜರಾತ್‌ನ ಶಾಲೆಗಳಲ್ಲಿ ಆಕೆಯ ಸೇವೆಯನ್ನು ಕೊನೆಗೊಳಿಸಲಾಗಿದೆ. ಎರಡು ವಿಭಿನ್ನ ಹೈಕೋರ್ಟ್‌ಗಳಲ್ಲಿ ತನ್ನ ವಾದ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿ, ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಾದ ಆಲಿಸಿದ ಸುಪ್ರೀಂ ಪೀಠವು, ನಾಲ್ಕು ವಾರಗಳ ನಂತರ ವಿಚಾರಣೆ ಆರಂಭಿಸುವುದಾಗಿ ಹೇಳಿದೆ.
ಲಿಂಗ ಪರಿವರ್ತಿತ ಮಹಿಳೆ ಪರ ವಾದ ಮಂಡಿಸಿದ ವಕೀಲರು, ‘ಆಕೆಗೆ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ನೇಮಕಾತಿ ಪತ್ರ ನೀಡಲಾಗಿದೆ, ಅವರನ್ನು ಕೆಲಸದಿಂದ ತೆಗೆದುಹಾಕುವ ಮೊದಲು ಆರು ದಿನಗಳ ಕಾಲ ಪಾಠ ಮಾಡಿದ್ದಾರೆ’ ಎಂದು ಹೇಳಿದರು.
ಗುಜರಾತ್ ಶಾಲೆಯಲ್ಲಿ ಆಕೆಗೆ ನೇಮಕಾತಿ ಪತ್ರವನ್ನು ನೀಡಲಾಯಿತು. ಆಕೆಯ ಲೈಂಗಿಕ ಗುರುತು ತಿಳಿದ ನಂತರ ಕೆಲಸಕ್ಕೆ ಸೇರಲು ಅವಕಾಶವನ್ನು ನಿರಾಕರಿಸಲಾಯಿತು ಎಂದು ವಕೀಲರು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರು