ರಾಜ್ಯ ಬಿಜೆಪಿ ಟಿಕೆಟ್ ನೀಡೋದಕ್ಕೆ ಯಡಿಯೂರಪ್ಪ ಮೊರೆ ಹೋದ ರಾಷ್ಟ್ರೀಯ ನಾಯಕರು..!

Views: 118
ಭಾರತೀಯ ಚುನಾವಣಾ ಆಯೋಗ ಕೂಡ ಎಲೆಕ್ಷನ್ ಡೇಟ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಹೀಗಿದ್ದಾಗ ಕಾಂಗ್ರೆಸ್ ಇಂದು ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಬಿಜೆಪಿ ಮಾತ್ರ ಇನ್ನೂ ಘೋಷಣೆ ಮಾಡಿಲ್ಲ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಮಣೆ ಹಾಕಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರದ ನಾಯಕರು, ಯಡಿಯೂರಪ್ಪ ಅವರನ್ನು ದೂರ ಇಟ್ಟು ಹೀನಾಯ ಸೋಲನ್ನು ಕಾಣಬೇಕಾಗಿ ಬಂತು. ಹೀಗಾಗಿ ಈಗ ಲೋಕಸಭೆ ಚುನಾವಣೆಗೆ ಮೊದಲೇ ಯಡಿಯೂರಪ್ಪ ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡ ಬಿಜೆಪಿ ಕೇಂದ್ರ ನಾಯಕರು ಹೊಸ ನಡೆ ಇಟ್ಟಿದ್ದಾರೆ. ಹಾಗಾದರೆ ಇದೀಗ ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡ ಯಡಿಯೂರಪ್ಪ ಅವರ ಮಾತೇ ಫೈನಲ್ ಆಗಿರುತ್ತಾ?
ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ, ಹೀಗಾಗಿಯೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣಬೇಕಾಗಿ ಬಂತು ಅನ್ನೋ ಆರೋಪ ಇದೆ. ಈ ಆರೋಪಕ್ಕೆ ಬಲ ನೀಡುವಂತೆ ಬಿಜೆಪಿ ಸರ್ಕಾರದ ಸಚಿವರೆಲ್ಲರೂ ಸೋತು ಸುಣ್ಣವಾಗಿದ್ದರು. ಹೀಗಿದ್ದಾಗ ಇದೀಗ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡಲು & ಈ ಮೂಲಕ ಯಡಿಯೂರಪ್ಪ ಅವರ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್‌ನ ನೀಡೋದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನೇನು 2ರಿಂದ 3 ದಿನದಲ್ಲಿ ಬಿಜೆಪಿ ಪಕ್ಷದ ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಬಿಜೆಪಿ 2014ರಲ್ಲಿ ಮೊದಲನೆಯ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು ಅಲ್ಲಿಂದ ಈವರೆಗೆ ಒಟ್ಟಾರೆ 10 ವರ್ಷ ಆಡಳಿತದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಅದರಲ್ಲೂ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಬಿಜೆಪಿ ಭರ್ಜರಿ ಗೆಲುವುನ್ನ ದಾಖಲಿಸುತ್ತದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ದಿಗ್ವಿಜಯ ಸಿಗುವುದು ಗ್ಯಾರಂಟಿ, ಅಂತಾ ಹೇಳಲಾಗುತ್ತಿದೆ. ಸಮೀಕ್ಷೆಗಳು ಈ ರೀತಿಯಾಗಿ ಭವಿಷ್ಯ ನುಡಿಯುತ್ತಿವೆ. ಹೀಗಾಗಿ ಬಿಜೆಪಿಯ ಕೇಂದ್ರದ ನಾಯಕರಿಗೆ ಕೂಡ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ.