ಸಾಂಸ್ಕೃತಿಕ

ಮಲೆನಾಡಿನ ರೈತರ ಸಂಭ್ರಮದ ಹಬ್ಬ”ಭೂಮಿ ತಾಯಿಗೆ ಸೀಮಂತ ಮಾಡಿ ಮಡಿಲು ತುಂಬುವ” ಭೂಮಿ ಹುಣ್ಣಿಮೆಗೆ ಭೂ ಮಣ್ಣಿ ತಯಾರಿ ಭರದಿಂದ ಸಿದ್ಧತೆ 

Views: 61

ಕನ್ನಡ ಕರಾವಳಿ ಸುದ್ದಿ: ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನ ಗ್ರಾಮೀಣ ರೈತರಿಗೆ ಮಹತ್ವ ಹಾಗೂ ಸಂಭ್ರಮದ ಹಬ್ಬ. ಅ.7ರಂದು ಹಬ್ಬ ಆಚರಿಸಲಿದ್ದು, ಮಲೆನಾಡಿನಲ್ಲಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ.

ಭೂಮಿ ತಾಯಿಗೆ ಸೀಮಂತ ಮಾಡಿ ಮಡಿಲು ತುಂಬುವ ಭಾವನಾತ್ಮಕ ಸನ್ನಿವೇಶ ಹೊಂದಿರುವ ಹಬ್ಬ ಆಗಿರುವುದರಿಂದ 10-15 ದಿನದ ಮೊದಲೇ ಸಿದ್ಧತೆ ಆರಂಭವಾಗುತ್ತವೆ. ಹಬ್ಬದ ಪೂಜೆ ಮತ್ತು ನೈವೇದ್ಯಕ್ಕೆ ಬುಟ್ಟಿ ಬಳಸಲಾಗುತ್ತದೆ.

ಭೂಮಣ್ಣಿ ಬುಟ್ಟಿ ಅಲಂಕಾರದಲ್ಲಿ ನಿರತ ಜನರು

ಈ ಬುಟ್ಟಿಯನ್ನು ಭೂಮಣ್ಣಿ ಬುಟ್ಟಿ ಎಂದು ಕರೆಯಲಾಗುತ್ತದೆ. ಬುಟ್ಟಿ ಅಲಂಕಾರಕ್ಕಾಗಿ ಮಹಿಳೆಯರು ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಕನಿಷ್ಠ ಎರಡು ಬುಟ್ಟಿ ಬಳಸುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಭೂಮಣ್ಣಿ ಬುಟ್ಟಿ ಎಂದು ಕರೆಯುವುದು ವಾಡಿಕೆ. ಬಿದಿರಿನಿಂದ ಮಾಡಿದ ಕನಿಷ್ಠ ಎರಡು ಬುಟ್ಟಿ ಹಬ್ಬಕ್ಕೆ ಬಹು ಮುಖ್ಯ. ಬುಟ್ಟಿಯನ್ನು ಹಬ್ಬಕ್ಕೆ ಬಳಸಲು ವಿಶೇಷ ವಿನ್ಯಾಸದಿಂದ ರೂಪಿಸಲಾಗುತ್ತದೆ.

ಸಗಣಿ ಮತ್ತು ಕೆಂಪು ಮಣ್ಣು ಹದಮಾಡಿ ಲೇಪನ ಮಾಡಲಾಗುತ್ತದೆ. ನಂತರ ಬುಟ್ಟಿಯನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಪ್ರತಿ ಬುಟ್ಟಿಗೆ ಈ ರೀತಿ ಮೂರು ಲೇಪನ ಬರುವಂತೆ ದಿನ ಬಿಟ್ಟು ದಿನ ಮೂರು ಸಲ ಸಗಣಿ ಮತ್ತು ಕೆಮ್ಮಣ್ಣಿನ ಮಿಶ್ರಣ ಬಳಿಯಲಾಗುತ್ತದೆ. ಚೆನ್ನಾಗಿ ಒಣಗಿದ ನಂತರ ಹಸೆ ಚಿತ್ತಾರ ಬರೆಯುತ್ತಾರೆ.

ಹಸೆ ಚಿತ್ತಾರ ಬರೆಯಲು ರಾಸಾಯನಿಕ ಬಣ್ಣ ಅಥವಾ ಪೇಟೆಯಿಂದ ಖರೀದಿಸಿದ ಇನ್ನಿತರ ಬಣ್ಣ ಬಳಸುವುದಿಲ್ಲ. ಅಕ್ಕಿಯನ್ನು ಮೂರು ದಿನ ನೆನೆಸಿ ಹಾಕಿ ನಂತರ ಚೆನ್ನಾಗಿ ರುಬ್ಬುತ್ತಾರೆ. ಹೀಗೆ ಮಾಡಿದಾಗ ಅಕ್ಕಿಹಿಟ್ಟು ಅಂಟಿನ ದ್ರವ ರೂಪ ಪಡೆಯುತ್ತದೆ. ತೆಂಗಿನ ಗರಿ ಕಟ್ಟಿಯಿಂದ ಅಕ್ಕಿ ಹಿಟ್ಟಿನ ಈ ಅಂಟಿನಿಂದ ಚಿತ್ತಾರ ಬರೆಯುತ್ತಾರೆ. ಈ ರೀತಿ ಚಿತ್ತಾರ ಬರೆಯಲು ಸಾಂಪ್ರದಾಯಿಕ ಪ್ರಜ್ಞೆ ಮತ್ತು ಕೌಶಲ ಬೇಕು. ಬುಟ್ಟಿಯ ತಳಭಾಗ ಮತ್ತು ಮೇಲ್ಮನ ನಾಲ್ಕು ಕಡೆ ಸಾಂಪ್ರದಾಯಿಕ ರೈಲಿಯಲ್ಲಿ ಚಿತ್ತಾರ ಬರೆಯಲಾಗುತ್ತದೆ.

ಆನಂದಪುರ ಸುತ್ತಮುತ್ತಲ ಗ್ರಾಮಗಳಾದ ಹೊಸೂರು, ಐಗಿನಬೈಲು, ಹೊಸಗುಂದ. ನೇದರವಳ್ಳಿ, ಚನ್ನಶೆಟ್ಟಿಕೊಪ್ಪ, ಜಂಬೂರಮನೆ, ಬ್ಯಾಡರಕೊಪ್ಪ, ಕ್ಕವಳ್ಳಿ, ಖೈರಾ, ತಂಗಳವಾಡಿ, ಕೆರೆಹಿತ್ತಲು, ಗಿಳಾಲಗುಂಡಿ, ಹೊಸಕೊಪ್ಪ,ಮಲೆನಾಡಿನ ರೈತರಿಗೆ ಸಂಭ್ರಮದ ಅತಿ ದೊಡ್ಡ ಹಬ್ಬ ಇದಾಗಿದೆ. ಭೂಮಣ್ಣಿ ಬುಟ್ಟಿ ಸಿದ್ಧಪಡಿಸುವುದು ಸಾಂಪ್ರದಾಯಿಕ ಕಲೆ. ಇದರ ಮೇಲ್ಮನಲ್ಲಿನ ಚಿತ್ತಾರದ ಗೆರಗಳು ಹೀಗೇ ಇರಬೇಕು ಎಂಬ ಮೌಖಿಕ ನಿಯಮವಿದೆ. ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಸಾಗಿ ಬಂದ ಕಲೆ ಇದಾಗಿದೆ.

ಕಣ್ಣೂರು, ಗೌತಮಪುರ, ಭೈರಾಪುರ, ಕುಡಿಗೆರೆ, ಅಡೂರು, ಇರುವಕ್ಕಿ ಮುಂತಾದ ಯಾವುದೇ ಊರಿಗೆ ಹೋದರೂ ರೈತ ಮಹಿಳೆಯರು, ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ತಾಯಿ-ಮಗಳು, ಅಕ್ಕ ತಂಗಿಯರು, ಚಿಕ್ಕಮ್ಮ ದೊಡ್ಡಮ್ಮನೊಂದಿಗೆ ಹೊಸ ಪೀಳಿಗೆ ಯುವತಿಯರು ಸೇರಿ ಎಲ್ಲರೂ ಈ ಕಾರ್ಯದಲ್ಲಿ ಮಗ್ನರಾಗಿರುವ ದೃಶ್ಯ ಕಂಡುಬರುತ್ತದೆ.

Related Articles

Back to top button