ಮರ ಬಿದ್ದು ಸ್ಕೂಟರ್ ಸವಾರೆ ಯುವತಿ ಸಾವು
Views: 289
ಕನ್ನಡ ಕರಾವಳಿ ಸುದ್ದಿ: ಮರ ಬಿದ್ದ ಪರಿಣಾಮ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಇಲ್ಲಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಹೆಬ್ಬಾಳದ ನಿವಾಸಿಯಾಗಿದ್ದ ಕೀರ್ತನಾ (24) ಮೃತ ಯುವತಿ.
ಮತ್ತೋರ್ವ ದ್ವಿಚಕ್ರ ವಾಹನ ಸವಾರ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಯುವತಿಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಯುವತಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಭಾನುವಾರ ರಜೆ ಇದ್ದಿದ್ದರಿಂದ ಕೀರ್ತನಾ ಹಾಗೂ ಆಕೆಯ ಸ್ನೇಹಿತರು ಸ್ಯಾಂಡಲ್‌ವುಡ್ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಿಸಲು ತೆರಳಿದ್ದರು. ಪಂದ್ಯ ವೀಕ್ಷಿಸಿದ ಬಳಿಕ ಸ್ಕೂಟರ್‌ನಲ್ಲಿ ಕೀರ್ತನಾ ಮನೆಗೆ ಮರಳುತ್ತಿದ್ದರು. ಈ ವೇಳೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಬೃಹತ್ ಮರವೊಂದು ಇವರ ಮೇಲೆ ಉರುಳಿದೆ.
ಮರ ಬಿದ್ದ ತಕ್ಷಣ ಸ್ಥಳೀಯರು ಮರದ ಕೊಂಬೆಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿದ್ದು, ಜಿಬಿಎ ಅಧಿಕಾರಿಗಳು, ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಧರೆಗುರುಳಿದ ಘಟನೆ ಇಂದು ಬೆಳಗಿನಜಾವ 2 ಗಂಟೆ ಸುಮಾರಿಗೆ ನವರಂಗ್ ಸರ್ಕಲ್‌ನಲ್ಲಿ ನಡೆದಿದೆ. ರಸ್ತೆಯ ಮತ್ತೊಂದು ಬದಿಯವರೆಗೂ ಚಾಚಿಕೊಂಡು ಮರ ಬಿದ್ದ ಪರಿಣಾಮ ಎರಡು ಕಾರುಗಳು, ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು, ಜಿಬಿಎ ಸಿಬ್ಬಂದಿ ಭೇಟಿ ನೀಡಿ ಮರ ತೆರವುಗೊಳಿಸಿದ್ದಾರೆ. ಮರಬಿದ್ದ ಪರಿಣಾಮ ತುಮಕೂರು ರಸ್ತೆಯಿಂದ ಬರುವ ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.






