ಮದುವೆಯಾಗುವುದಾಗಿ ನಂಬಿಸಿ ಯುವಕ ಪರಾರಿ, ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!

Views: 195
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ನಡೆದಿದೆ.
ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೊಬ್ಬ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಪ್ರವೀಣ್ ಗೌಡ (22) ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದು, ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ
ವಿದ್ಯಾರ್ಥಿನಿ ತಾಯಿ ಜತೆ ತನ್ನನ್ನು ಪ್ರವೀಣ್ ಜತೆ ಮದುವೆ ಮಾಡಿಸುವಂತೆಯೂ ಹೇಳಿದ್ದಳು. ಪ್ರವೀಣ್ ಗೌಡ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವಕ ಆಕೆಯನ್ನು ಜತೆ ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ‘ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿ ಸಾಯುವುದಾದರೆ ಸಾಯಿ, ನಾನು ನಿನ್ನನ್ನು ಮದುವೆಯಾಗಲ್ಲ’ ಎಂದು ಹೇಳಿ ಮೋಸ ಮಾಡಿದ್ದಾನೆ.
ಇದರಿಂದ ಮನನೊಂದ ವಿದ್ಯಾರ್ಥಿನಿ ನವೆಂಬರ್ 20 ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ. ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ತಾಯಿ ಜತೆ ಮಲಗಿದ್ದಾಗ ವಾಂತಿ ಮಾಡಿದ್ದರಿಂದ ಮನೆಮಂದಿಗೆ ವಿಚಾರ ತಿಳಿದು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನವೆಂಬರ್ 26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.