ಇತರೆ

ಮಕ್ಕಳಾಗಿಲ್ಲ ಎಂದು ಅಸ್ಪತ್ರೆಯಲ್ಲಿಯೇ ಹಸುಗೂಸನ್ನು ಕದ್ದೊಯ್ದ ಮಹಿಳೆ!

Views: 85

ಕನ್ನಡ ಕರಾವಳಿ ಸುದ್ದಿ: ತನಗೆ ಮಕ್ಕಳಾಗಿಲ್ಲ ಎಂದು ಕೊರಗಿನಿಂದ ಮಹಿಳೆಯೊಬ್ಬರು ನಗರದ ಜಿಲ್ಲಾಸ್ಪತ್ರೆಯಿಂದ ಹಸುಗೂಸನ್ನು ಕದ್ದು  ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟೆಯ ಸಾಕ್ಷಿ ಯಾದವಾಡ ಆರೋಪಿ.

ಈಕೆಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ. ಇದಕ್ಕಾಗಿ ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲೇ ನಿರಂತರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಮಕ್ಕಳಾಗಲು ಸಾಧ್ಯವಿಲ್ಲ ಎಂಬುದು ಖಾತ್ರಿಯಾದ ಬಳಿಕ ಮಗುವನ್ನು ಕದಿಯುವ ಯೋಚನೆ ಮಾಡಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಈಕೆ ಒಂದು ವರ್ಷದಿಂದ ಬಾಗಲ ಕೋಟೆಯ ಜಿಲ್ಲಾಸ್ಪತ್ರೆಗೆ ನಿರಂತರವಾಗಿ ಗರ್ಭಿಣಿಯರು ತಪಾಸಣೆಗೆ ಬರುವ ರೀತಿ ಬಂದು ಹೋಗಿದ್ದಾಳೆ. ಈ ಅವಧಿಯಲ್ಲಿ ಅಲ್ಲಿನ ಹೆರಿಗೆ ಐಸಿಯು ವಿಭಾಗ, ಸಾಮಾನ್ಯ ವಾರ್ಡ್ ಎಲ್ಲವನ್ನೂ ಗಮನಿಸಿ ಮಗುವನ್ನು ಕದಿಯಲು ಯೋಜನೆ ರೂಪಿಸಿದ್ದಳು.

ತಾನು ಗರ್ಭಿಣಿ ಎಂದು ತಾಯಿ ಮತ್ತು ಸಹೋದರಿಯನ್ನು ನಂಬಿಸಿ, ಶುಕ್ರವಾರ ಸಂಜೆಯೇ ಅವರ ಜತೆಗೆ ಆಸ್ಪತ್ರೆಗೆ ಬಂದು ಸಾಮಾನ್ಯ ವಾರ್ಡ್ ನಲ್ಲಿ ದಾಖಲಾಗಿದ್ದಳು. ಅದೇ ವೇಳೆಗೆ ಬಾಗಲಕೋಟೆ ನವನಗರದ ಮಾಬೂಬಿ ನದಾಫ್ ಎಂಬ ಮಹಿಳೆಯೂ ಹೆರಿಗೆಗೆ ದಾಖಲಾಗಿದ್ದಳು. ಮಾಬೂಬಿ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಾಬೂಬಿ ಜತೆಗೆ ನರ್ಸ್ ಎಂದು ಪರಿಚಯಿಸಿಕೊಂಡು, ಮಗುವಿಗೆ ಕಫ ಇದೆ. ತೆಗೆಸಬೇಕಿದೆ ಎಂದು ನಂಬಿಸಿ ಮಗುವನ್ನು ಕೊಂಡೊಯ್ದಿದ್ದಳು.

ಎಷ್ಟು ಹೊತ್ತಾದರೂ ಮಗುವನ್ನು ನರ್ಸ್ ವಾಪಸ್ ತಂದಿಲ್ಲ ಎಂದು ಗಾಬರಿಗೊಂಡ ಮಾಬೂಬಿ, ಆಕೆಯ ತಾಯಿ ಹಾಗೂ ಸಹೋದರಿ ಆಸ್ಪತ್ರೆ ಯಿಡೀ ಹುಡುಕಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಪೊಲೀಸರು ಮೂರು ತಂಡ ರಚಿಸಿ ಶೋಧ ನಡೆಸಲು ಮುಂದಾದರು.

ಸಾಕ್ಷಿ ಮಗುವಿನೊಂದಿಗೆ ಸಾಮಾನ್ಯ ವಾರ್ಡ್‌ನಲ್ಲಿದ್ದಾಗ, ಅದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಡಿ ಗ್ರೂಪ್ ನೌಕರ ಹಾಗೂ ಅಕ್ಕಪಕ್ಕದವರೂ ಆಕೆಯ ಮೇಲೆ ಅನುಮಾನಪಟ್ಟಿದ್ದರು. ಮಗು ಕಳ್ಳತನವಾಗಿದೆ ಎಂಬ ಸುದ್ದಿ ಹಬ್ಬಿದ ಕೂಡಲೇ ಆ ಡಿ ಗ್ರೂಪ್ ಸಿಬಂದಿ “ಸಾಕ್ಷಿ ಎಂಬವಳು, ಹೆರಿಗೆಯಾದ ಗಂಟೆಯಲ್ಲೇ ತಿರುಗಾಡುತ್ತಿದ್ದಾಳೆ. ಅದು ಹೇಗೆ ಸಾಧ್ಯ’ ಎಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಪೊಲೀಸರು ಸಾಕ್ಷಿಯನ್ನು ವಿಚಾರಿಸಿದಾಗ ಆಕೆ ಸತ್ಯ ಒಪ್ಪಿಕೊಂಡಳು.

Related Articles

Back to top button