ಮಂಗಳೂರು ವಿ.ವಿ.ಪರಿಷ್ಕೃತ ಶಿಸ್ತು ಕ್ರಮ : ಪರೀಕ್ಷಾ ಅಕ್ರಮಕ್ಕೆ ದಂಡ
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪರೀಕ್ಷೆಗಳಲ್ಲಿ ನಕಲು ಸಹಿತ ಅಕ್ರಮಗಳಲ್ಲಿ ತೊಡಗಿದರೆ 5 ಸಾವಿರ ರೂ.ಗಳ ದಂಡ ತೆರಬೇಕು.

Views: 0
ದಕ್ಷಿಣ ಕನ್ನಡ: ಪರಿಷ್ಕೃತ ಶಿಸ್ತು ಕ್ರಮದಡಿ ಪರೀಕ್ಷಾ ಅಕ್ರಮವೆಸುವ ಅಭ್ಯರ್ಥಿಗಳ ಜತೆಗೆ ಪರೀಕ್ಷಾ ವಿಭಾಗದ ಅಧಿಕಾರಿಗಳು, ಉತ್ತರಪತ್ರಿಕೆ ಮೌಲ್ಯಮಾಪಕರು, ಕೊಠಡಿ ಮೇಲ್ವಿಚಾರಕರು ಮತ್ತು ಪ್ರಾಂಶುಪಾಲರೂ ದಂಡಕ್ಕೆ ಒಳಗಾಗಲಿದ್ದಾರೆ.
ಪರಿಷ್ಕೃತ ಶಿಸ್ತು ಕ್ರಮಗಳಿಗೆ ಮಂಗಳೂರು ವಿ.ವಿ.ಯ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.
ಅ. 12ರಂದು ನಡೆಯುವ ವಿ.ವಿ. ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆದು ಜಾರಿಗೊಳಿಸುವ ಪ್ರಯತ್ನ ನಡೆದಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಜಾರಿಯಾಗುವ ಸಾಧ್ಯತೆಯಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ| ಮಂಜುನಾಥ ಪಟ್ಟಾಭಿ ನೇತೃತ್ವದಲ್ಲಿ ಪ್ರೊ|ಪಿ.ಎಲ್. ಧರ್ಮ, ಪ್ರೊ| ಬಿ.ಎಚ್. ಶೇಖರ್, ನ್ಯಾಯವಾದಿ ಅಕ್ಷತಾ, ಪಿಪಿಸಿ ಪ್ರಾಂಶುಪಾಲ ಡಾ| ರಾಘವೇಂದ್ರ ಮತ್ತು ಪರೀಕ್ಷಾಂಗ ಕುಲಸಚಿವರ ತಂಡ ಈ ನಿಯಮಗಳ ಕರಡನ್ನು ತಯಾರಿಸಿತ್ತು.
ಪರೀಕ್ಷೆ ಸಂದರ್ಭ ಅಭ್ಯರ್ಥಿ ಸಂಬಂಧಿತ ಪರೀಕ್ಷೆಯ ನಕಲನ್ನು ಹೊಂದಿದ್ದರೆ ಪರೀಕ್ಷೆಯಿಂದ ಅಮಾನ್ಯಗೊಳಿಸುವ ಜತೆಗೆ ದಂಡವನ್ನು ತೆರಬೇಕಾಗುತ್ತದೆ. ಉತ್ತರ ಪತ್ರಿಕೆಯ ಪುಟಗಳು, ಡ್ರಾಯಿಂಗ್ ಶೀಟ್‌ಗಳನ್ನು ಹಾಳು ಅಥವಾ ಹಾನಿಗೊಳಪಡಿಸಿದರೆ ಪರೀಕ್ಷೆಯಿಂದ ಅಮಾನತುಗೊಳಿಸಿ ಮುಂದಿನ ಒಂದು ವರ್ಷ ಪರೀಕ್ಷೆ ಬರೆಯದಂತೆ ತಡೆ ಮಾತ್ರವಲ್ಲದೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಹೊಸ ಶಿಸ್ತು ಕ್ರಮ ಜಾರಿಯಾದರೆ ಪರೀಕ್ಷೆ ಸಂದರ್ಭ ಯಾವುದೇ ಗ್ಯಾಜೆಟ್ ಬಳಸಿದರೆ 2 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ.
ಮೌಲ್ಯಮಾಪಕರಿಗೂ ದಂಡ!
ತಮ್ಮ ಕಾಲೇಜಿನ ಮೌಲ್ಯಮಾಪಕರು ಮೌಲ್ಯಮಾಪನಕ್ಕೆ ಗೈರಾದರೆ ಅಥವಾ ಮೌಲ್ಯಮಾಪಕರಿಂದ ತಪ್ಪುಗಳಾದರೆ ಸುಮಾರು ಕಾಲೇಜು ಪ್ರಾಂಶುಪಾಲರಿಗೆ 40 ಸಾವಿರ ರೂ.ವರೆಗಿನ ದಂಡ ವಿಧಿ ಸುವ ಪ್ರಕ್ರಿಯೆಯನ್ನು ಹೊಸ ಪರಿಷ್ಕರಣೆಯಲ್ಲಿ ಸೇರ್ಪಡೆ ಗೊಳಿಸಲಾಗಿದೆ ಎಂದು ವಿ.ವಿ. ಮೂಲಗಳಿಂದ ತಿಳಿದುಬಂದಿದೆ.