ಕರಾವಳಿ

ಮಂಗಳೂರು :ಪತ್ನಿಯಿಂದಲೇ ಪತಿಯ ಕುತ್ತಿಗೆಯನ್ನು ಹಿಸುಕಿ ಉಸಿರು ಗಟ್ಟಿಸಿ ಕೊಲೆ  

Views: 88

ಮಂಗಳೂರು,  ಕೂಲಿ ಕಾರ್ಮಿಕನೊಬ್ಬನನ್ನು  ಆತನ ಪತ್ನಿಯೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಗರದ ನಂತೂರು ಬಳಿ ನಡೆದಿದೆ.

ಕೊಲೆ ಮಾಡಿ ನಾಟಕವಾಡಿದ ಆರೋಪದ ಮೇಲೆ  ಆರೋಪಿ ಪತ್ನಿ ಗೀತಾಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ಹನುಮಂತಪ್ಪ ಪೂಜಾರಿ (29) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಪತ್ನಿ ಗೀತಾ ಕೊಂದ ಬಳಿಕ ಯಾರೋ ತನ್ನ ಪತಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ಪತ್ನಿಯೇ ಪತಿಯನ್ನು ಕೊಲೆಗೈದಿರುವುದನ್ನು ಪತ್ತೆ ಹಚ್ಚಿದ್ದಾರೆ.

ತನ್ನ ಪತಿ ಹನುಮಂತಪ್ಪ ಪೂಜಾರಿ ಇಬ್ಬರು ಮಕ್ಕಳೊಂದಿಗೆ ನಂತೂರಿನ ಬಾಡಿಗೆ ಮನೆಯಲ್ಲಿ 10 ವರ್ಷಗಳಿಂದ ವಾಸವಿದ್ದು, ಹೆಲ್ಪರ್ ಕೆಲಸ ಮಾಡಿಕೊಂಡಿದ್ದೇವೆ. ಜ.10ರಂದು ಹೆಲ್ಪರ್ ಕೆಲಸಕ್ಕೆ ಹೋಗಿದ್ದ ಪತಿಯು ಸಂಜೆ 7ಕ್ಕೆ ಮನೆಗೆ ಬರುವಾಗ ವಿಪರೀತ ಕುಡಿದುಕೊಂಡು ಬಂದಿದ್ದರು. ಮನೆಯಲ್ಲೂ ಪುನಃ ಕುಡಿದಿದ್ದರು. ನಂತರ ಊಟ ಮಾಡಿ ಮನೆಯಲ್ಲಿ ಎಲ್ಲರೊಂದಿಗೆ ಮಲಗಿದ್ದರು. ಬೆಳಗ್ಗಿನ ಜಾವ 2ಗಂಟೆಗೆ ಎಚ್ಚರವಾದಾಗ ಪಕ್ಕದಲ್ಲಿ ಮಲಗಿದ್ದ ಪತಿ ಗೇಟಿನ ಬಳಿ ಮಲಗಿದ್ದು ಕಂಡು ಬಂದರು. ಕುಡಿತದಿಂದ ವಾಂತಿ ಮಾಡಿಕೊಂಡು ಮಾತನಾಡಲಾಗದ ಸ್ಥಿತಿಯಲ್ಲಿದ್ದವರನ್ನು ಕಂಡು ಪತಿಯ ಅಣ್ಣ ವಿನಾಯಕನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ಬಳಿಕ ಇಬ್ಬರೂ ಸೇರಿ 108 ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆ ಚಿಕಿತ್ಸೆಗೆ ಕರೆದುಕೊಂಡು ಹೋದೆವು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಪತಿ ದಿನಾ ವಿಪರೀತ ಕುಡಿಯುತ್ತಿದ್ದು, ಅದರಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜ.11ರಂದು ಬೆಳಗ್ಗೆ ಕದ್ರಿ ಠಾಣೆಗೆ ತೆರಳಿದ್ದ ಗೀತಾ ದೂರಿನಲ್ಲಿ ಮನವಿ ಮಾಡಿದ್ದಳು.

ಈ ಮಧ್ಯೆ ಹನುಮಂತಪ್ಪ ಪೂಜಾರಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತನ ಕುತ್ತಿಗೆಯನ್ನು ಹಿಸುಕಿ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿ ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ಹನುಮಂತಪ್ಪ ಪೂಜಾರಿಯ ಪತ್ನಿ ಗೀತಾಳನ್ನು ವಿಚಾರಣೆಗೊಳಪಡಿಸಿದಾಗ ಆಕೆ ಕೊಲೆಗೈದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಹಾಗೇ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Back to top button