ಮಂಗಳೂರು ಗುಂಪು ಹತ್ಯೆ ಪ್ರಕರಣ: ಮೂವರು ಪೊಲೀಸರು ಅಮಾನತು

Views: 130
ಕನ್ನಡ ಕರಾವಳಿ ಸುದ್ದಿ: ನಗರದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್, ಹೆಡ್ ಕಾನ್‌ಸ್ಟೆಬಲ್ ಚಂದ್ರ ಪಿ ಮತ್ತು ಕಾನ್‌ಸ್ಟೆಬಲ್ ಎಲ್ಲಾಲಿಂಗ ಗುಂಪು ಹತ್ಯೆ ಪ್ರಕರಣದಲ್ಲಿ ಅಮಾನತುಗೊಂಡವರು.
ಅಪರಿಚಿತ ವ್ಯಕ್ತಿಗೆ ಗುಂಪು ಹಲ್ಲೆ ನಡೆದಿರುವ ಬಗ್ಗೆ ಈ ಮೂವರಿಗೆ ಮಾಹಿತಿಯಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 14/2025ರಲ್ಲಿ ಫಿರ್ಯಾದುದಾರರಾಗಿ ಹಾಗೂ ಸ್ಥಳದಲ್ಲಿ ದೊರೆತ ಶವದ ಪಂಚನಾಮೆಗೆ ಪಂಚರನ್ನಾಗಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಟವಾಡಿದ ಆಟಗಾರರು ಹಾಗೂ ಪ್ರೇಕ್ಷಕರನ್ನು ಬಳಸಿಕೊಂಡಿರುವುದು ಕಂಡು ಬಂದಿರುತ್ತದೆ. ಇದರಿಂದ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ, ಬಳಿಕ ಗುಂಪು ಹತ್ಯೆ ಪ್ರಕರಣ ದಾಖಲಾಗಲು ಕಾರಣವಾಗಿದೆ.
ಆದ್ದರಿಂದ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮತ್ತು ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರಸ್ತಾಪಿಸಲಾಗಿದೆ. ಈ ಮೇಲಿನ ಆಪಾದನೆಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.