ಇತರೆ

ಭೀಕರ ಅಪಘಾತ:ಕಾರಿಗೆ ಐರಾವತ ಬಸ್ ಡಿಕ್ಕಿ, ನಾಲ್ವರ ಸಾವು

Views: 154

ಕನ್ನಡ ಕರಾವಳಿ ಸುದ್ದಿ:ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಮಂಡ್ಯ ಸಮೀಪದ ತೂಬಿನಕೆರೆ ಬಳಿ ಅತೀ ವೇಗವಾಗಿ ಬರುತ್ತಿದ್ದ ಐರಾವತ ಬಸ್ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಗರದ ನಾಲ್ವರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರಿನಿಂದ ಪಿರಿಯಾಪಟ್ಟಣಕ್ಕೆ ಕಾರಿನಲ್ಲಿ ಈ ನಾಲ್ವರು ಹೋಗುತ್ತಿದ್ದಾಗ ಎಕ್ಸ್‌ಪ್ರೆಸ್ ಹೆದ್ದಾರಿಯ ಮಂಡ್ಯ ಸಮೀಪದ ತೂಬಿನಕೆರೆ ಬಳಿ ಸರ್ವಿಸ್ ರಸ್ತೆಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.

ಸರ್ವಿಸ್ ರಸ್ತೆಗೆ ಹೋಗಲು ಕಾರಿನ ವೇಗವನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಹಿಂದೆ ಅತಿ ವೇಗವಾಗಿ ಬರುತ್ತಿದ್ದ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅದರಲ್ಲಿ ಇದ್ದವರು ಹೊರ ಬರಲಾಗದೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪರಿಹಾರ ಕಾರ್ಯಾಚರಣೆ ಕೈಗೊಂಡರು.

ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button