ಬೀಜಾಡಿಯಲ್ಲಿ ಸೌಕೂರು ಮೇಳದ ಯಕ್ಷ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ

Views: 86
ಕೋಟೇಶ್ವರ: ಬೀಜಾಡಿ ಹಳೆಯ ಕೆನರಾ ಬ್ಯಾಂಕಿನ ಹತ್ತಿರದ ನಿವಾಸಿ ಶ್ರೀಮತಿ ಪಾರ್ವತಿ ಮತ್ತು ಶ್ರೀ ಮಂಜುನಾಥ ಶೆಟ್ಟಿಗಾರ್ ಅವರ ಮನೆಯಲ್ಲಿ ನಡೆದ ಶ್ರೀ ಕ್ಷೇತ್ರ ಸೌಕೂರು ಮೇಳದ 35ನೇ ವರ್ಷದ ಸೇವಾ ಬಯಲಾಟದ ಯಕ್ಷ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನ ನೀಡಿ ಗೌರವಿಸಲಾಯಿತು.
ಮಾರ್ಚ್ 12 ರಂದು ಬೀಜಾಡಿ ಸೇವಾಕರ್ತರ ಸ್ವಗ್ರಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ನಡೆದ ಸೌಕೂರು ಮೇಳದವರಿಂದ ನಡೆದ ಸೇವಾ ಬಯಲಾಟದ ಸಭಾ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು ನಂತರ ಅವರು ಮಾತನಾಡಿ ‘ದೇವರ ಪ್ರೀತ್ಯಾರ್ಥ ಬೆಳಕಿನ ಸೇವೆ ಮಾಡುತ್ತೇವೆ ಎಂದು ಹರಕೆ ಹೇಳಿಕೊಂಡರೆ ಭಕ್ತರ ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಯನ್ನು ಭಗವಂತ ಕ್ಷಿಪ್ರವಾಗಿ ಅನುಗ್ರಹಿಸುತ್ತಾರೆ. ಯಕ್ಷಗಾನ ಒಂದು ಆರಾಧನೆ ಕಲೆ ಅದು ನಿಂತ ನೀರಾಗದೆ ಸದಾ ಹರಿಯುತ್ತಿರಲಿ. ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನ ನೀಡಲು ಕಾರಣೀಕರ್ತರಾದ ಸೇವಾ ಕರ್ತರನ್ನು ಅಭಿನಂದಿಸಿದರು.
ಸೌಕೂರು ಮೇಳದ ಪ್ರಧಾನ ಭಾಗವತರಾದ ಹೆರೆಂಜಾಲು ಗೋಪಾಲ ಗಾಣಿಗ, ವಾಸ್ತು ತಜ್ಞ, ಜ್ಯೋತಿಷಿ, ಪ್ರಸಂಗಕರ್ತರಾದ ಡಾ. ಬಸವರಾಜ್ ಶೆಟ್ಟಿಗಾರ್,ಬೀಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗುಲಾಬಿ ಅಮ್ಮ, ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಚಿಕ್ಕು ಅಮ್ಮ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಆನಂದ ಬಿಳಿಯಾರ್, ಬೀಜಾಡಿ ನಿವಾಸಿ ಸಮಾಜಸೇವಕ ಸೂರಿ ಸುರೇಂದ್ರ ಅವರನ್ನು ಸನ್ಮಾನ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಇದ್ದರು.
ಯೋಗೀಶ್ ಶೆಟ್ಟಿಗಾರ್ ಅತಿಥಿಗಳನ್ನು ಗೌರವಿಸಿದರು. ಡಾ. ಕೆ ಬಸವರಾಜ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಬಿ ಚಂದ್ರಶೇಖರ್ ಪದ್ಮಶಾಲಿ ಕಾರ್ಯಕ್ರಮ ನಿರ್ವಹಿಸಿದರು. ಮೇಳದ ಮ್ಯಾನೇಜರ್ ಭದ್ರಾಪುರ ಶ್ರೀಧರ್ ವಂದಿಸಿದರು.
ನಂತರ ಸೌಕೂರು ಮೇಳದವರಿಂದ ಬಯಲಾಟವಾಗಿ ನೂತನ ಪ್ರಸಂಗದ ಪ್ರದರ್ಶನ ನಡೆಯಿತು.