ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವು

Views: 133
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಶಾಸಕಿ ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ. ಹೈದರಾಬಾದ್ ಸಮೀಪದ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟ್ಟಂಚೆರು ಹೊರವಲಯದ ರಸ್ತೆಯಲ್ಲಿ ಇಂದು (ಫೆ.23) ಮುಂಜಾನೆ ಅಪಘಾತ ಸಂಭವಿಸಿದೆ.
ಕೇವಲ 37 ವರ್ಷದ ಲಾಸ್ಯ ನಂದಿತಾ ಇದೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ತೆಲಂಗಾಣ ವಿಧಾನಸಭೆ ಪ್ರವೇಶಿಸಿದ್ದರು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಂದಿತಾ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಬದುಕುಳಿದಿಲ್ಲ. ಘಟನೆಯಲ್ಲಿ ನಂದಿತಾ ಅವರ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹತ್ತು ದಿನಗಳ ಹಿಂದೆಯಷ್ಟೇ ನರ್ಕಟ್‌ಪಲ್ಲಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಲಾಸ್ಯ ಅವರು ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದ್ದರು. ಫೆಬ್ರವರಿ 13ರಂದು ಬಿಆರ್‌ಎಸ್ ರ‍್ಯಾಲಿಯಲ್ಲಿ ಭಾಗವಹಿಸಲು ನಲ್ಗೊಂಡಕ್ಕೆ ತೆರಳುತ್ತಿದ್ದಾಗ ನಂದಿತಾ ಅವರ ಕಾರು ಅಪಘಾತಕ್ಕೀಡಾಗಿತ್ತು.
1986ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಲಾಸ್ಯ ನಂದಿತಾ, ಸಣ್ಣ ವಯಸ್ಸಿನಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ದಶಕದ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿದ್ದ ಅವರು, 2016ರಲ್ಲಿ ಸಿಕಂದರಾಬಾದ್‌ನ ಕವಾಡಿಗುಡದಿಂದ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು. 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಬಿಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಇದಕ್ಕೂ ಮೊದಲು ನಂದಿತಾ ಅವರ ತಂದೆ ಜಿ ಸಾಯಣ್ಣ ಈ ಕ್ಷೇತ್ರದ ಶಾಸಕರಾಗಿದ್ದರು.