ಬಡಗುತಿಟ್ಟಿನ ಯಕ್ಷರಂಗದ ಮಾಸ್ ಹೀರೋ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

Views: 443

ಯಕ್ಷಗಾನದಲ್ಲಿ ಪ್ರಬುದ್ಧ ಕಲಾವಿದ ಎಂಬ ಹೆಗ್ಗಳಿಕೆ ಪಡೆಯಲು ಹಲವು ಅರ್ಹತೆಗಳಿವೆ ಆಳಂದ ನಿಲುವು, ಕೃತಬದ್ಧ ಸ್ವರ, ವೇಷ ಭೂಷಣ ಕಟ್ಟುವ ಕೌಶಲ್ಯ, ಗತ್ತು- ಗಾಂಭೀರ್ಯ, ಪೌರಾಣಿಕ ಕಥಾ ವಸ್ತುಗಳ ಆಳಜ್ಞಾನ, ಲಯಬದ್ಧತೆ, ಆಕರ್ಷಕ ಶರೀರ ಮತ್ತು ಅಭಿನಯದಲ್ಲಿ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕತೆಯಿಂದ ಈ ಎಲ್ಲಾ ವಿಭಾಗಗಳಲ್ಲಿಯೂ ಪರಿಪೂರ್ಣ ಕಲಾವಿದ ಎಂದೆನಿಸಿಕೊಂಡ ಪ್ರಸನ್ನ ಶೆಟ್ಟಿಗಾರ್ ಅವರು ತನ್ಮೂಲಕ ಯಕ್ಷ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.
ಇವರು ಒಡ್ಡೋಲಗ ವೇಷ, ಮೂರನೇ ವೇಷ, ಪುರುಷವೇಷ ಹೀಗೆ ಹಂತ ಹಂತವಾಗಿ ಹಿರಿಯರ ಒಡನಾಟದಿಂದಲೇ ಪಳಗಿ ಬಡಗಿನ ಪ್ರಸಿದ್ಧ ಸಾಲಿಗ್ರಾಮ ಡೇರೆ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಬಡ್ತಿ ಹೊಂದಿ, ಯಕ್ಷಾಭಿಮಾನಿಗಳ ಮಾಸ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ.
ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ, ಜಲವಳ್ಳಿ ಅವರ ನಾಯಕ ಮತ್ತು ಖಳನಾಯಕನ ಪಾತ್ರದಂತೆ ಇವರು ಅದೇ ಸಾಲಿನಲ್ಲಿ ಸಮಾನಾಗಿ ಪಾತ್ರ ನಿರ್ವಹಿಸುತ್ತಿದ್ದರು.
ಪ್ರಸನ್ನ ಶೆಟ್ಟಿಗಾರ್ ಅವರು ಬಡಗಿನ ಎಲ್ಲಾ ತರದ ಪುರುಷ ವೇಷವನ್ನು ನಿರ್ವಹಿಸಿದವರು.ಗದಾಯುದ್ಧದ ಕೌರವ, ಭೀಮ, ಕೀಚಕ, ದುಶ್ಯಾಸನ, ಕಾರ್ತವೀರ್ಯ ಚಕ್ರ ಚಂಡಿಕದಲ್ಲಿ ಭರ್ಬರಿಕ, ಬಬ್ರುವಾಹನ, ಶ್ರೀದೇವಿ ಮಹಾತ್ಮೆಯ ವಿಷ್ಣು, ರುದ್ರಕೋಪ, ಹರಿಶ್ಚಂದ್ರ,ಕೃಷ್ಣ, ಭೀಷ್ಮ, ಕರ್ಣ, ರಾಮ,ಅರ್ಜುನ, ಸಾಲ್ವ ಇವರು ಅಭಿನಯಿಸಿದ ಪ್ರಸಿದ್ಧ ಪಾತ್ರಗಳು.ಇವರ ಅಭಿನಯದಲ್ಲಿ ಬಡಾ ಬಡಗಿನ ಕಲಾವಿದರ ಚಿರಮುದ್ರೆ ಕಾಣಬಹುದಾಗಿದೆ.
ಪ್ರಸನ್ನ ಅವರು ಬಡಗಿನ ಖ್ಯಾತ ಸ್ತ್ರೀ ವೇಷದಾರಿ ಶಶಿಕಾಂತ್ ಶೆಟ್ಟಿ ಅವರ ಚಂದ್ರಮತಿ- ಸತ್ಯ ಹರಿಶ್ಚಂದ್ರ, ದಕ್ಷ ಯಜ್ಞದಲ್ಲಿ ಈಶ್ವರ- ದಾಕ್ಷಾಯಿಣಿ ಪಾತ್ರದಿಂದ ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಪ್ರತಿರೋಧ ವೇಷಧಾರಿಯಾಗಿ ದ್ರೌಪತಿ ಪ್ರತಾಪದಲ್ಲಿ ಅರ್ಜುನ ಕೃಷ್ಣಾರ್ಜುನದಲ್ಲಿ ಸುಭದ್ರೆ -ಅರ್ಜುನ ,ಸಾಲ್ವ- ಅಂಬೆ ಪಾತ್ರದಲ್ಲಿ ಈ ಜೋಡಿಯಿಂದ ಇನ್ನಷ್ಟು ಕೀರ್ತಿ ಸಂಪಾದಿಸಲು ಕಾರಣವಾಯಿತು.
ಬಡಗಿನ ಇನ್ನೋರ್ವ ಹಿರಿಯ ಕಲಾವಿದ ಈಶ್ವರ್ ನಾಯ್ಕ್ ಮಂಕಿ ಜೋಡಿ ಆಗಿ ಭೀಷ್ಮ- ಪರಶುರಾಮನಾಗಿ ಅಭಿನಯಿಸಿ ಜನ ಮಾನಸದಲ್ಲಿ ಚಿರಸ್ಥಾಯಿಯಾದರು.
ಕಾರ್ತವೀರ್ಯಾರ್ಜುನದಲ್ಲಿ ಜಲವಳ್ಳಿಯ ಕಾರ್ತವೀರ್ಯ ಪ್ರಸನ್ನ ರಾವಣ ಪಾತ್ರದಲ್ಲಿ, ಗದಾಯುದ್ಧದಲ್ಲಿ ಜಲವಳ್ಳಿಯ ಕೌರವ- ರಾವಣ, ಭೀಮ – ಕೌರವ ಪಾತ್ರ ಇಂದಿಗೂ ಜನರ ಮನಸ್ಸಿನಲ್ಲಿ ಉಳಿಯಬಹುದಾದ ಪಾತ್ರವಾಗಿದೆ.
ಪ್ರಸನ್ನ ಅವರನ್ನು ಕೊಂಡದಕುಳಿಗೆ ಹೋಲಿಕೆ ಮಾಡುತ್ತಿರುವ ಜನರು ಬಡಬಡಗಿನ ಕಣ್ಣಿಮನೆ, ಯಾಜಿ, ಚಿಟ್ಟಾಣಿಗೆ ಹೋಲಿಸಿ ಸ್ಪೂರ್ತಿದಾಯಕ ಕಲಾವಿದರೆನಿಸಿಕೊಂಡಿದ್ದಾರೆ.
ಯಕ್ಷ ಗುರುಗಳಾದ ಎಂ.ಕೆ. ರಮೇಶ ಆಚಾರ್ಯ ಆರ್ಗೋಡು ಮೋಹನದಾಸ ಶೆಣೈ, ಖ್ಯಾತ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್, ಪವನ್ ಕಿರಣಕೆರೆ ಹಾಗೂ ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಕುಮಾರ್ ಹೆಗ್ಡೆ ಅವರು ಹೊಸ ಹೊಸ ವೇಷಗಳನ್ನು ಮಾಡುವಾಗ ಈ ಪಾತ್ರವನ್ನು ನೀನೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿ ಸ್ಪೂರ್ತಿ ತುಂಬುತ್ತಾರೆ ಎಂದು ನೆನೆಸಿಕೊಂಡಿದ್ದಾರೆ ಪ್ರಸನ್ನ.
ಯಕ್ಷರಂಗದಲ್ಲಿ ಹಂತ ಹಂತವಾಗಿ ಬೆಳೆದು ಪ್ರಭುದ್ಧ ಕಲಾವಿದರಾಗಿ 2023 -24ನೇ ಸಾಲಿನ ತಿರುಗಾಟದಲ್ಲಿ ಮೇಳದ ಹಿರಿಯ ಕಲಾವಿದರಾದ ಸ್ತೀವೇಷಧಾರಿ ಶಶಿಕಾಂತ್ ಶೆಟ್ಟಿ ಮತ್ತು ಮಂಕಿ ಈಶ್ವರ್ ನಾಯ್ಕ್ ಇವರ ಮಾರ್ಗದರ್ಶನದಲ್ಲಿ ಮೇಳದ ಯಜಮಾನರ ಕೃಪೆಯಿಂದ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಅಲಂಕರಿಸಿದ್ದು. ಇದು ಅವರ ಕಲಾ ಸಾಧನೆಗೆ ಸಿಕ್ಕ ಗೌರವ.
ತಂತ್ರಾಡಿ ಮಕ್ಕಳ ಮೇಳದ ಹಿರಿಯಣ್ಣಶೆಟ್ಟಿಗಾರ್ ಅವರಿಂದ ಕಲಾ ದೀಕ್ಷೆ ಪಡೆದ ಇವರು ಅನಂತರ ಕಲಿತದ್ದು ಮಂದಾರ್ತಿ ಮೇಳದಲ್ಲಿ , ತನ್ನ ಹುಟ್ಟೂರಾದ ಮಂದಾರ್ತಿಯಲ್ಲಿಯೇ ಪಿಯುಸಿ ವರೆಗಿನ ಶಿಕ್ಷಣ ಪಡೆದು 19ರ ಹರೆಯದಲ್ಲಿ ಕಲಾಜೀವನ ಆರಂಭಿಸಿದ ಶೆಟ್ಟಿಗಾರರು ಮಂದಾರ್ತಿಯಲ್ಲಿ ಏಳು ವರ್ಷ ತಿರುಗಾಟ ಮಾಡಿ, ಸಾಲಿಗ್ರಾಮ ಮೇಳಕ್ಕೆ ಸೇರಿ 13 ವರ್ಷಗಳಿಂದ ಪ್ರಧಾನ ಕಲಾವಿದರಾಗಿ ಕಲಾನುಭವ ಪಡೆದಿದ್ದಾರೆ.
ತಂದೆ ಗಂಗಾಧರ ಶೆಟ್ಟಿಗಾರ್ ತಾಯಿ ಸುಲೋಚನ ಶೆಟ್ಟಿಗಾರ್ ಜನಿಸಿದ್ದು ಉಡುಪಿ ಜಿಲ್ಲೆಯ ಬೃಹ್ಮಾವರ ತಾಲೂಕಿನ ಮಂದಾರ್ತಿಯಲ್ಲಿ. ಹೇಳಿಕೊಳ್ಳುವಂತಹ ಕಲಾ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಇವರು ತಂದೆ ತಾಯಿಯ ಕಲಾ ಪ್ರೇರಣೆಯನ್ನು ಸದಾ ನೆನಪಿಸಿಕೊಳ್ಳುತ್ತಾರೆ.
ಯಾಜಿ ಮತ್ತು ಕೊಂಡದ ಕುಳಿಯವರ ಮೆಚ್ಚುವ ಶೆಟ್ಟಿಗಾರರು ಯಾಜಿಯ ಗಾಂಭೀರ್ಯ, ಕೊಂಡದಕುಳಿಯವರ ಲಾಲಿತ್ಯವಿದೆ ಆದ್ದರಿಂದಲೇ ಕಟ್ಟುವೇಶ ಮತ್ತು ರಾಜವೇಷಗಳನ್ನು ಸುಲಲಿತವಾಗಿ ನಿಭಾಯಿಸುವ ಚಾಕಚಕ್ಯತೆ ಇವರಲ್ಲಿದೆ.
ಯಾವುದೇ ವೇಷವಿರಲಿ ಶೆಟ್ಟಿಗಾರರು ತನ್ನದೇ ಆದ ಚಾಪು ಮೂಡಿಸಬಲ್ಲರು. ಪ್ರಸನ್ನ ಅವರು ಹಳೆಯ ಮತ್ತು ಹೊಸ ಪ್ರಸಂಗಗಳನ್ನು ಸಮಾನವಾಗಿ ಇಷ್ಟಪಡುವ ಅವರು ಉಭಯ ಪ್ರಸಂಗಗಳ ಪಾತ್ರಗಳಿಗೂ ಸೈನಿಸಿಕೊಂಡಿದ್ದಾರೆ.
ವೇಷಕ್ಕೆ ಬೇಕಾದ ಸದೃಢವಾದ ಶರೀರ- ಶಾರೀರ, ಆಕರ್ಷಣೀಯ ಸ್ವರದ್ರೂಪ,ಕುಣಿತದಲ್ಲಿ ವಿವಿಧ ವಿನ್ಯಾಸಗಳು, ಭಾಷೆ -ಭಾವಗಳ ಮಧುರ ಮೈತ್ರಿ, ವಿನಯ ಗುಣ, ಮಿತ ಭಾಷಿತ್ವ, ಸ್ನೇಹ ಶೀಲತೆಯಿಂದ ಇವರನ್ನು ಬಹಳ ಎತ್ತರಕ್ಕೆ ಕೊಂಡೊಯ್ಡಿದೆ.
ವೈಶಂಪಾಯನ ತೀರ ಚಲನಚಿತ್ರದಲ್ಲಿ ಅಭಿನಯಿಸಿ ಭೇಷ್ ಎಸಿಕೊಂಡಿದ್ದಾರೆ. ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೇನೆ ಆದರೆ ದಶರಥನ ಪಾತ್ರವನ್ನು ಮಾಡಲು ಕಾಯುತ್ತಿದ್ದೇನೆ ಎನ್ನುವ ಪ್ರಸನ್ನ
ಪತ್ನಿ ವೀಣಾ ಮಗಳು ಧನಿಷ್ಕ ಇವರೊಂದಿಗೆ ಸುಖೀ ಸಂಸಾರ.
ಸಂಗೀತ ನಿರ್ದೇಶಕ ರವಿ ಬಸ್ರೂರು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ‘ವೀರ ಚಂದ್ರಹಾಸ’ ಯಕ್ಷಗಾನ ಚಲನಚಿತ್ರದಲ್ಲಿ ಪ್ರಸನ್ನ ಶೆಟ್ಟಿಗಾರ ಅವರು ದುಷ್ಟಬುದ್ಧಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಶೀಘ್ರದಲ್ಲಿಯೇ ತೆರೆ ಕಾಣಲಿದೆ.
ಪ್ರಸ್ತುತ ಬಡಗಿನ ಸಾಲಿಗ್ರಾಮ ಡೇರೆ ಮೇಳದಲ್ಲಿ ಪ್ರಸಂಗ ಕರ್ತ ದೇವದಾಸ್ ಈಶ್ವರ ಮಂಗಲ ವಿರಚಿತ ನೂತನ ಸಾಮಾಜಿಕ ಕಥಾನಕ ‘ಶುಭ ಲಕ್ಷಣ’ ಪ್ರಸಂಗದಲ್ಲಿ ಕಥಾನಾಯಕ ‘ಶುಭಕರ’ ಪಾತ್ರದಲ್ಲಿ ಜನಮನ ಗೆದ್ದಿದ್ದಾರೆ
ಶೆಟ್ಟಿಗಾರರಿಗೆ ಕರಾವಳಿಯಲ್ಲಿ ಮಾತ್ರವಲ್ಲ ಬೆಂಗಳೂರು, ಮುಂಬೈ ಮಹಾನಗರಗಳಲ್ಲೂ ಅಭಿಮಾನಿಗಳಿದ್ದಾರೆ. ಇವರು ಡಾ. ಶಾಂತರಾಮ್ ಪ್ರಶಸ್ತಿ ಪಡೆದಿರುವುದಲ್ಲದೆ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನ ನೀಡಿದ್ದಾರೆ.
ಪ್ರತೀ ಪಾತ್ರಗಳಲ್ಲೂ ತನ್ಮಯತೆಯಿಂದ ಅಭಿನಯಿಸಿ ಜೀವ ತುಂಬುವ ಪ್ರಸನ್ನ ಎಂದೂ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದವರಲ್ಲ.
——–ಸುಧಾಕರ ವಕ್ವಾಡಿ, ಕನ್ನಡ ಕರಾವಳಿ ನ್ಯೂಸ್