ರಾಜಕೀಯ

ಬಜೆಟ್ ಮಂಡನೆ ವೇಳೆ ಕೇಂದ್ರದ ತಾರತಮ್ಯ ಕಟುವಾಗಿ ಟೀಕಿಸಿದ ಸಿಎಂ: ಸದನದಿಂದ ಹೊರ ನಡೆದ ಬಿಜೆಪಿ ಶಾಸಕರು

Views: 42

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯವನ್ನು ಕಟುವಾಗಿ ಟೀಕಿಸಿದ್ದನ್ನು ಖಂಡಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.

ಕರ್ನಾಟಕಕ್ಕೆ ಕೇಂದ್ರದಿಂದ 45, 322 ಕೋಟಿ ರೂಪಾಯಿ ತೆರಿಗೆ ಅನ್ಯಾಯವಾಗಿದೆ. ಬಿಜೆಪಿ ಆಡಳಿತ ರಾಜ್ಯಗಳು ಅನ್ಯಾಯವಾದರೂ ಪ್ರಶ್ನಿಸದೆ ಸುಮ್ಮನಿವೆ. ನಮ್ಮ ರಾಜ್ಯದ ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ತೆರಿಗೆ ಪಾಲನ್ನು ತರುವಲ್ಲಿ ವಿಫಲವಾಗಿತ್ತು ಎಂದು ಸಿಎಂ ಹೇಳಿದರು.

ಇದರಿಂದ ಕೋಪಗೊಂಡ ವಿಪಕ್ಷ ನಾಯಕ ಆರ್‌. ಆಶೋಕ್, “ನೀವಿಲ್ಲಿ ಬಜೆಟ್ ಮಂಡಿಸಲು ಬಂದಿದ್ದೀರೋ, ಕೇಂದ್ರ ಸರ್ಕಾರವನ್ನು ಟೀಕಿಸಲು ಬಂದಿದ್ದೀರೋ” ಎಂದು ಅಸಮಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಇತರ ಬಿಜೆಪಿ ಶಾಸಕರು ಸಿಎಂ ಬಜೆಟ್ ಓದುವ ವೇಳೆ ಗದ್ದಲ ಸೃಷ್ಟಿಸಿದರು. ಈ ನಡುವೆ ಸಿಎಂ ಬಜೆಟ್ ಮಂಡನೆ ಮುಂದುವರಿಸಿದರು.

ಬಳಿಕ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಬಜೆಟ್‌ಗೆ ಬಹಿಷ್ಕಾರ ಹಾಕಿದ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು. “ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ” ಎಂದು ಕೂಗುತ್ತಾ ಸದನದಿಂದ ಹೊರಬಂದು ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಈ ಬಾರಿ ಸೂಟ್‌ಕೇಸ್‌ ಬದಲು ಬ್ಯಾಗ್‌ ಹಿಡಿದು ಆಗಮಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಸರ್ಕಾರಿ ಸ್ವಾಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿ ಇರಿಸಲಾಗಿತ್ತು

2024-25ನೇ ಸಾಲಿನ ರಾಜ್ಯ ಬಜೆಟ್​ ಗಾತ್ರ 3,71,383 ಕೋಟಿ ರೂ. ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

Related Articles

Back to top button