ಬಂಟ್ವಾಳ:ಕಲ್ಲಿನ ಕೋರೆಯಲ್ಲಿಟ್ಟ ಜಿಲೆಟಿನ್ ಕಡ್ಡಿಗಳು ಸ್ಫೋಟ; 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

Views: 53
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಲ್ಲು ಕ್ವಾರಿಯೊಂದರಲ್ಲಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಬಿಸಿಲಿನ ತೀವ್ರತೆಗೆ ಸ್ಫೋಟಗೊಂಡಿದ್ದು, ಹಲವು 15ಕ್ಕೂ ಮನೆಗಳಿಗೆ ಹಾನಿಯಾಗಿದೆ.
ಎಸ್ಪಿ ಯತೀಶ್ ಕುಮಾರ್ ಸೂಚನೆಯಂತೆ ಕ್ವಾರಿಯ ಮ್ಯಾನೇಜನರ್‌ನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಸಂಪೂರ್ಣ ವಿವರ: ಮಾಡತ್ತಡ್ಕದ ಕೋರೆಯಲ್ಲಿ ಕಲ್ಲು ಒಡೆಯಲು ಸ್ಫೋಟಕಗಳನ್ನು ತರಲಾಗಿತ್ತು. ಕಲ್ಲಿನ ರಾಶಿಯ ಮಧ್ಯದಲ್ಲಿ ಒಂದು ಬಾಕ್ಸ್ ಡಿಟೋನೇಟರ್ ಹಾಗೂ 200 ಜಿಲೆಟಿನ್ ಕಡ್ಡಿಗಳನ್ನು ಒಟ್ಟಿಗಿಡಲಾಗಿತ್ತು. ಬಿಸಿಲಿನ ತೀವ್ರತೆಗೆ ಮಧ್ಯಾಹ್ನ 1.25ರ ಸುಮಾರಿಗೆ ಸ್ಫೋಟಗೊಂಡಿದೆ. ಸ್ಫೋಟದಿಂದ ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿದ್ದ ಮನೆಗಳಿಗೆ ಹಾನಿಯಾಗಿದೆ. ನೂರು ಮೀಟರ್ ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿವೆ. ಸ್ಫೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ 1 ಕಿ.ಮೀ ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಸಣ್ಣಪುಟ್ಟ ಪ್ರಮಾಣದ ಹಾನಿಯಾಗಿದೆ.
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಪೋಟಕಗಳನ್ನು ತಂದು ಬೇಜವಾಬ್ದಾರಿತನದಿಂದ ಇಟ್ಟು ಹೋದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುತ್ತೇವೆ. ಭೂಕಂಪದ ಅನುಭವವಾಗಿದ್ದು, ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿದ್ದೇವೆ. ಮನೆಗಳ ಛಾವಣಿ ಸೇರಿ ವಸ್ತುಗಳಿಗೆ ಹಾನಿಯಾದ ಬಗ್ಗೆ ದೂರುಗಳು ಬಂದಿದೆ. ಸುಮಾರು 12 ಮನೆಗಳಿಗೆ ಹಾನಿಯಾಗಿರುವ ಮಾಹಿತಿಯಿದೆ ಎಂದು ಕಂದಾಯ ಇಲಾಖೆ ತಿಳಿಸಿದ್ದರೂ, ಸ್ಥಳೀಯರು 15 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ” ಎಂದು ಎಸ್ಪಿ ಯತೀಶ್ ಎನ್. ತಿಳಿಸಿದರು.