ಧಾರ್ಮಿಕ

ಫೆ.12 ರಿಂದ 24, ಕೊರವಡಿ – ವಾರ್ಷಿಕ ಭಜನಾ ಮಹೋತ್ಸವ

ಸೋದೆ ಶ್ರೀಗಳ ಆಗಮನದ ಸುವರ್ಣ ಮಹೋತ್ಸವಾಚರಣೆ 

Views: 181

ಕುಂದಾಪುರ : ಕುಂಭಾಶಿ ಸಮೀಪದ ಕೊರವಡಿಯ ಪುರಾಣ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊರವಡಿಯ ಶ್ರೀ ರಾಮ ಭಜನಾ ಸಂಘದ ನೇತೃತ್ವದಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮವು ಫೆ.12ರ ಸೋಮವಾರದಿಂದ ಫೆ. 24 ರ ಶನಿವಾರದವರೆಗೆ ನಡೆಯಲಿದೆ.

ಬಹು ವರ್ಷಗಳಿಂದಲೂ ಗ್ರಾಮ ಹಾಗೂ ಪರವೂರ ಭಕ್ತಾಭಿಮಾನಿಗಳು ಈ ವಾರ್ಷಿಕ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದರು. 1972ರಿಂದ ಈ ಭಜನಾ ಮಂಗಲೋತ್ಸವಕ್ಕೆ ಸೋದೆ ಮಠಾಧೀಶ ಶ್ರೀ ವಿಶ್ವೋತ್ತಮತೀರ್ಥ ಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡುತ್ತಿದ್ದರು. ಅವರ ನಂತರ ಪೀಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಈ ಪರಂಪರೆಯನ್ನು ಮುಂದುವರೆಸಿದರು. ಪ್ರಸ್ತುತ ವರ್ಷ ಭಕ್ತರು, ಸ್ವಾಮಿಗಳ ಆಗಮನದ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ.

ದೇವಳ ಇತಿಹಾಸ: ಕೊರವಡಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಈ ನಾಡಿನ ಅತ್ಯಂತ ಪುರಾತನ ಹಾಗೂ 2ನೇ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪಾಂಡವರು ತಮ್ಮ ವನವಾಸ ಕಾಲದಲ್ಲಿ ಈ ಪುಣ್ಯ ಭೂಮಿಯಲ್ಲಿ ಸಂಚರಿಸುವಾಗ ಶ್ರೀ ವಿಷ್ಣುಮೂರ್ತಿ ದೇವರ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರೆಂದು ಉಲ್ಲೇಖವಿದೆ. ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಈ ಸನ್ನಿಧಾನದಲ್ಲಿ ಊರ ಹಿರಿಯರು ಒಂದು ಸಣ್ಣ ಕಟ್ಟಡವನ್ನು ನಿರ್ಮಿಸಿದರು. ಇಲ್ಲಿ ಒಂದು ಸಣ್ಣ ಕಂಡಿ (ಕಿಟಕಿ)ಯಿಂದ ದೇವರನ್ನು ನೋಡುವ ವ್ಯವಸ್ಥೆ ಮಾಡಲಾಗಿತ್ತು. ಆದ್ದರಿಂದ ಈ ದೇವಸ್ಥಾನಕ್ಕೆ “ಕಂಡಿ ದೇವಸ್ಥಾನ” ವೆಂಬ ಹೆಸರು ಬಂದಿತೆಂದು ಪ್ರತೀತಿ ಇದೆ.

ದೇವಸ್ಥಾನ ನಿರ್ಮಾಣವಾದ ನಂತರ ಊರ ಹಿರಿಯರ ಮನೆಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮವನ್ನು ವರ್ಷಂಪ್ರತಿ ನಿರಂತರವಾಗಿ ಈ ದೇವಸ್ಥಾನದಲ್ಲಿಯೇ ನಡೆಸಲು ಆರಂಭಿಸಿದರು. ಇತ್ತೀಚಿನ ವರ್ಷಗಳಲ್ಲಿ ಈ 12 ದಿನಗಳ ಭಜನಾ ಕಾರ್ಯಕ್ರಮ ಅನೇಕ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡು ಊರ ಪರವೂರಿನ ಎಲ್ಲಾ ಭಕ್ತವೃಂದದವರ ಪಾಲ್ಗೊಳ್ಳುವಿಕೆಯಿಂದ ಒಂದು ಭಕ್ತಿಯ ಮೇರು ಸಂಗಮವಾಗಿ ನಡೆಯುತ್ತಾ ಬಂದಿದೆ.

ಫೆ.12ರಿಂದ ದೀಪ ಸ್ಥಾಪನೆಗೊಂಡು ಭಜನೆ ಆರಂಭವಾಗಿದ್ದು, ಫೆ.23 ರ ಸಂಜೆ ಸೋದೆ ಮಠಾಧೀಶರು ಕ್ಷೇತ್ರಕ್ಕೆ ಆಗಮಿಸುವರು. ಸಂಜೆ 5 ಗಂಟೆಗೆ ದೇವಾಲಯ ಸಮೀಪದ ಶ್ರೀವಾಣಿ – ಶ್ರೀನಿವಾಸ ಅಡಿಗರ ನಿವಾಸದಿಂದ ಸೋದೆ ಶ್ರೀ ವಿಶ್ವವಲ್ಲಭ ಸ್ವಾಮಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಕರೆತರಲಾಗುವುದು. ನಂತರ ತರುಣ ಸಂಘದ ವತಿಯಿಂದ ರಾತ್ರಿ ವಸಂತ ಮಹೋತ್ಸವ ನಡೆಯುವುದು. ಫೆ.24 ರ ಮುಂಜಾನೆ ಭಜನಾ ಮಂಗಲೋತ್ಸವ, ಸ್ವಾಮಿಗಳ ಆಶೀರ್ವಚನ ನೆರವೇರುವುದು.

—–ವರದಿ  ಕೆ.ಜಿ.ವೈದ್ಯ

 

 

 

.

Related Articles

Back to top button