ಯುವಜನ

“ಪ್ರೇಮಿಗಳ ದಿನ” ಪ್ರೇಯಸಿಗೆ ಸರ್ಪೈಸ್‌ ಕೊಡಲು ಬಂದ ಪ್ರೇಮಿಯೇ ಕಳ್ಳನಾದ!

Views: 45

ಪ್ರೇಮಿಗಳ ದಿನದಂದು.ದೂರದ ಊರಿನಿಂದ ತನ್ನವಳನ್ನು ನೋಡಬೇಕೆಂದು ಪ್ರೇಯಸಿಗೆ ಸರ್ಪೈಸ್‌ ಕೊಟ್ಟು ಖುಷಿ ಪಡಿಸಲು ಹೋಗಿ, ಜನರ ದೃಷ್ಟಿಯಲ್ಲಿ ಕಳ್ಳನಾಗಿ ಬಿಟ್ಟಿದ್ದ. ಸೇರಿದ್ದ ಜನರ ತಪ್ಪು ತಿಳುವಳಿಕೆಯಿಂದಾಗಿ ಜನರಿಂದ ಹಾಗೂ ಪೊಲೀಸರಿಂದ. ಪ್ರೇಮಿಯೊಬ್ಬ ಧರ್ಮದೇಟನ್ನು ತಿಂದ ಘಟನೆ ನಡೆದಿದೆ.

ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಯುವತಿಯ ಮೊಬೈಲ್ ಕಿತ್ತು ಪರಾರಿ ಆಗುತ್ತಿದ್ದ. ಯುವತಿಯ ಕಿರುಚಾಟಕ್ಕೆ ಅಲ್ಲಿದ್ದ ಜನ ಸ್ಪಂದಿಸಿ, ಯುವಕನನ್ನು ಬೆನ್ನತ್ತಿದ್ದರು. ಇದನ್ನೂ ಕಂಡ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಕಾನ್ಸ್‌ಟೇಬಲ್‌ ಷಾಜಿಯಾ ತಬಸ್ಸುಂ ಅಲರ್ಟ್‌ ಆಗಿ ಕೂಡಲೇ ಬೆನ್ನತ್ತಿ ಯುವಕನನ್ನು ಹಿಡಿದು ಅಶೋಕ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಯುವಕನನ್ನು ವಿಚಾರಣೆಗೊಳಪಡಿಸಿದಾಗಲೇ ಅಸಲಿ ಸಂಗತಿಯೇ ಬೇರೆ ಆಗಿತ್ತು.

ರಾಯಚೂರಿನ ಶಿವರಾಜ್ ಎಂಬುವವನಿಗೆ ಫೆಬ್ರವರಿ 14ರ ಪ್ರೇಮಿಗಳ ದಿನ ಎಂಬುದು ದುಸ್ವಪ್ನವಾಗಿ ಬಿಟ್ಟಿತ್ತು. ಅಂದಹಾಗೇ, ಶಿವರಾಜ್‌ ಪ್ರೀತಿ ಮಾಡುತ್ತಿದ್ದ ಹುಡುಗಿ ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರೇಮಿಗಳ ದಿನದಂದು ಆಕೆಗೆ ಸರ್ಪೈಸ್‌ ಕೊಡಬೇಕೆಂದು ಶಿವರಾಜ್‌ ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದ. ಕಾಲೇಜು ಬಳಿ ಬಂದವನಿಗೆ ಶಾಕ್‌ ಆಗಿತ್ತು. ಯಾಕೆಂದರೆ ಪ್ರೀತಿಸಿದವಳು ಬೇರೆ ಹುಡುಗನ ಜತೆ ಅನ್ಯೋನ್ಯವಾಗಿ ಮಾತಾಡುತ್ತಿದ್ದನ್ನು ಕಂಡಿದ್ದೆ ತಡ ಶಿವರಾಜ್‌ ಸಿಟ್ಟು ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಹುಡುಗಿ ಜತೆಗೆ ಗಲಾಟೆ ಮಾಡಿಕೊಂಡಿದ್ದ.

ಈ ವೇಳೆ ನಾವಿಬ್ಬರು ಪ್ರೇಮಿಗಳಲ್ಲ, ಸ್ನೇಹಿತರಷ್ಟೇ ಎಂದು ಯುವತಿ ಸಮಾಧಾನವಾಗಿ ಹೇಳಿದ್ದಾಳೆ. ಪ್ರೇಯಸಿಯ ಮಾತನ್ನು ನಂಬದ ಶಿವರಾಜ್‌ ಹಾಗಾದರೆ ನಿನ್ನ ‌ಮೊಬೈಲ್ ಕೊಡು ನೋಡುತ್ತಿನಿ ಎಂದು ಕೇಳಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದಾಗ ಬಲವಂತವಾಗಿ ಮೊಬೈಲ್‌ ಕಿತ್ತುಕೊಂಡಿದ್ದಾನೆ. ಇದರಿಂದ ಸಿಟ್ಟಾದ ಯುವತಿ ಕಿರುಚಾಡಿದ್ದಾಳೆ. ಎಲ್ಲಿ ಆಕೆ ನೋಡುವ ಮುನ್ನವೇ ಮೊಬೈಲ್‌ ಕಸಿದುಕೊಳ್ಳುತ್ತಾಳೋ ಎಂದು ಅಲ್ಲಿಂದ ಓಡಿದ್ದಾನೆ. ಇಲ್ಲೇ ಯಡವಟ್ಟು ಆಗಿದ್ದು, ಆತ ಓಡಿದ್ದನ್ನು ನೋಡಿದ ಕೆಲವರು ಯುವತಿಯ ಮೊಬೈಲ್ ಸ್ನ್ಯಾಚ್ ಮಾಡಿದ್ದಾನೆಂದುಕೊಂಡರು.

ಆತನನ್ನು ಒಬ್ಬರ ಹಿಂದೆ ಒಬ್ಬರು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಜನರೆಲ್ಲರೂ ಓಡುವುದನ್ನು ಕಂಡ ಟ್ರಾಫಿಕ್ ಕಾನ್ಸ್‌ಟೇಬಲ್‌ ಷಾಝಿಯಾ ಕೂಡ ಶಿವರಾಜ್‌ನನ್ನು ಬೆನ್ನತ್ತಿ ಹಿಡಿದಿದ್ದಾರೆ. ನಂತರ ಹೊಯ್ಸಳ ಸಿಬ್ಬಂದಿಗೆ ಒಪ್ಪಿಸಿದ್ದರು. ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಈ ಎಲ್ಲ ಸಂಗತಿ ಹೊರ ಬಿದ್ದಿದೆ. ಒಟ್ಟಾರೆ ಇಲ್ಲಿ ಎಲ್ಲವೂ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಆಗಿ, ಸರ್ಪೈಸ್‌ ಕೊಡಲು ಬಂದ ಪ್ರೇಮಿ ಕಳ್ಳ ಎಂದು ಎನಿಸಿಕೊಂಡಿದ್ದ. ಸದ್ಯ ಅಶೋಕನಗರ ಪೊಲೀಸರು ಇಬ್ಬರನ್ನು ಕರೆಸಿ ಬುದ್ಧಿ ಹೇಳಿ ವಾಪಸ್‌ ಕಳಿಸಿದ್ದಾರೆ.

Related Articles

Back to top button