ಪಕ್ಷ ಬಯಸಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಪ್ರಮೋದ್ ಮಧ್ವರಾಜ್

Views: 33
ಉಡುಪಿ, ಎಲ್ಲರಿಗೂ ಟಿಕೆಟ್ ಗಾಗಿ ಪ್ರಯತ್ನಿಸುವ ಹಕ್ಕಿದೆ. ನಾನು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಈಗಾಗಲೇ 6,000 ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿದ್ದೇನೆ. ಪಕ್ಷ ಬಯಸಿದರೆ ನಾನು ಚುನಾವಣೆಗೆ ನಿಲ್ಲಲು ಸಿದ್ಧ ಇದ್ದೇನೆ. ಇಲ್ಲದಿದ್ದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀನುಗಾರರ ಸಮಸ್ಯೆಯನ್ನು ಸರಕಾರಗಳ ಮುಂದೆ ಸಮರ್ಥವಾಗಿ ಮಂಡಿಸುವ ಅನುಭವ ಜನಪ್ರತಿನಿಧಿ ಆದವರಿಗೆ ಬೇಕಾಗುತ್ತದೆ. ಮೀನುಗಾರರು ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಕೊಡುತ್ತದೆ ಎಂಬ ವಿಶ್ವಾಸ ಇದೆ. ಗುಜರಾತ್ ನಿಂದ ಪಶ್ಚಿಮ ಬಂಗಾಳದವರೆಗೆ ಒಬ್ಬನೇ ಒಬ್ಬ ಮೀನುಗಾರ ಸಂಸದ ಇಲ್ಲ ಎಂದರು.
ದೇಶದ ಮೀನುಗಾರರ ಸಮಸ್ಯೆಯನ್ನು ಕೇಂದ್ರ ಸರಕಾರದ ಮುಂದೆ ಸಂಸತ್ ನಲ್ಲಿ ಮಾತನಾಡಲು ಯೋಗ್ಯ ವ್ಯಕ್ತಿ ಬೇಕು ಎಂಬುದು ಮೀನುಗಾರರಿಗೆ ಮನವರಿಕೆ ಆಗಿದೆ. ಆರು ತಿಂಗಳಿಂದ ನಾನು ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದ 24 ಜಿಲ್ಲೆಯಲ್ಲಿ ಮೀನುಗಾರ ಮುಖಂಡರ ಸಭೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಪಕ್ಷಕ್ಕೆ ನಾನು ಅರ್ಹ ಎಂದು ಕಂಡರೆ ನನಗೆ ಟಿಕೆಟ್ ಕೊಡುತ್ತದೆ. ಬೇರೆ ಅರ್ಹರು ಇದ್ದರೆ ಅವರಿಗೆ ಟಿಕೆಟ್ ನೀಡುತ್ತದೆ. ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ನನ್ನ ಕಡೆಗೆ ಇದೆ ಎಂಬ ಮಾಹಿತಿ ಇದೆ. ಟಿಕೆಟ್ ಗೆ ಎಲ್ಲರಿಗೂ ಪ್ರಯತ್ನ ಮಾಡುವ ಹಕ್ಕು ಇದೆ. ನಾನು ಆಕಾಂಕ್ಷಿ ಎಂದು ನಾಯಕರ ಬಳಿ ಹೇಳಿದ್ದೇನೆ. ಚುನಾವಣೆಯಲ್ಲಿ ಎದುರಾಳಿಯನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು.