ನಿರುದ್ಯೋಗ, ಬೆಲೆಯೇರಿಕೆ, ಬರಗಾಲ,ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವೇ ಇಲ್ಲದ ವಿನಾಶಕಾರಿ ಬಜೆಟ್: ಮುಖ್ಯಮಂತ್ರಿ

Views: 25
ದೇಶದ ಒಟ್ಟು ಸಾಲವನ್ನು 190 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಜೆಟ್ ಇದಾಗಿದ್ದು, ನಿಜವಾದ ಅರ್ಥದಲ್ಲಿ ಇದು ವಿಕಸಿತ ಅಲ್ಲ. ಭಾರತದ ವಿನಾಶಕಾರಿ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ವಿಶ್ಲೇಷಿಸಿದರು. ಕಳೆದ ವರ್ಷಕ್ಕಿಂತ 5.8% ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ನಿರುದ್ಯೋಗ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಮಾತೇ ಆಡಿಲ್ಲ. ಸಾಲ ಹೆಚ್ಚಾಗಿರುವುದು, ಒಟ್ಟು ಸಾಲದ ಪ್ರಮಾಣ ವಿಪರೀತ ಏರಿಕೆ ಆಗಿರುವುದನ್ನು ಹೇಳಿಲ್ಲ. 47,65,758 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷದ ಬಜೆಟ್ ಗಾತ್ರ 45,30,97 ಕೋಟಿ ರೂ. ಆಗಿತ್ತು. ಈ ಬಾರಿ 2,62,671 ಕೋಟಿ ರೂ. ಹೆಚ್ಚುವರಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗಾತ್ರ ಈ ವರ್ಷ 5.8% ಹೆಚ್ಚಾಗಿದೆ. ಬಜೆಟ್‌ನ 47 ಲಕ್ಷ ಕೋಟಿ ರೂ.ಗಳಲ್ಲಿ 16,85,494 ಕೋಟಿ ರೂ ಸಾಲ ಮಾಡಿದ್ದಾರೆ ಎಂದರು.
ಜನರ ಮುಂದೆ ಮುಚ್ಚಿಟ್ಟಿರುವುದೇ ಹೆಚ್ಚು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿಲ್ಲ. ನಿರುದ್ಯೋಗ, ಬೆಲೆಯೇರಿಕೆ, ಬರಗಾಲ , ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ವಿಕಸಿತ ಭಾರತ ಎಂದು ನರೇಂದ್ರ ಮೋದಿ ಪ್ರಚಾರದಲ್ಲಿ ಹೇಳುತ್ತಾರೆ. ಈ ಬಜೆಟ್ ವಿಕಸಿತ ಬಜೆಟ್ ಎನ್ನುತ್ತಾರೆ. ಇದು ನಿಜವಾದ ಅರ್ಥದಲ್ಲಿ ವಿನಾಶಕಾರಿ ಭಾರತ ಮಾಡುವ ಬಜೆಟ್. ಬಡವರು, ಯುವಕರು, ರೈತರು, ಮಹಿಳೆಯರಿಗಾಗಿ ವಿಕಸಿತ ಭಾರತ ಎನ್ನುತ್ತಾರೆ. ಆದರೆ, ಈ ಸಮುದಾಯಗಳ ಪ್ರಗತಿಗೆ ಕಾರ್ಯಕ್ರಮಗಳೇ ಇಲ್ಲ ಎಂದು ಹೇಳಿದರು.
ಬೆಳೆ ಪರಿಹಾರವನ್ನು ಬಜೆಟ್‌ನಲ್ಲಿ ಹೇಳಿಲ್ಲ. ಎಂಎಸ್‌ಪಿಗೆ ಕೆಲವು ಬೆಳೆಗಳನ್ನು ಮಾತ್ರ ಸೇರಿಸಿದ್ದಾರೆ. ರೈತರ ಎಲ್ಲಾ ಬೆಳೆಗಳು ಎಂಎಸ್‌ಪಿ ಅಡಿ ಬರಬೇಕು. ಇದರ ಬಗ್ಗೆ ಏನನ್ನೂ ಬಜೆಟ್‌ನಲ್ಲಿ ಹೇಳಿಲ್ಲ. ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಪ್ರಮಾಣ ಶೇ. 30ಕ್ಕೆ ಇಳಿಸಿ, ಉಳಿದ ಭಾರವನ್ನು ಬಡವರು, ಮಧ್ಯಮ ವರ್ಗದವರ ಮೇಲೆ ಹೇರಿದ್ದಾರೆ ಎಂದರು.