ರಾಜಕೀಯ

ನವರಾತ್ರಿಗೆ ಶಾಸಕರಿಗೆ ನಿಗಮ ಮಂಡಳಿ  ಅಧ್ಯಕ್ಷಗಿರಿಯ ಉಡುಗೊರೆ 

Views: 0

ಬೆಂಗಳೂರು, ವಿಜಯದಶಮಿ ಹಬ್ಬದ ಹೊತ್ತಿಗೆ ಕಾಂಗ್ರೆಸ್‌ನ ಹಲವು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷತೆಯ ಹಬ್ಬದ ಉಡುಗೊರೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ನಿಗಮ ಮಂಡಳಿಗಳಿಗೆ ಶಾಸಕರ ನೇಮಕಾತಿ ಸಂಬಂಧ ನಿನ್ನೆ ದೆಹಲಿಯಲ್ಲಿ ವರಿಷ್ಠರಿಗೆ ಪಟ್ಟಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳು ಪೂರೈಸಿರುವ ನಡುವೆಯೇ ನಿಗಮ ಮಂಡಳಿಗಳ ನೇಮಕಾತಿಗೂ ಮುಖ್ಯಮಂತ್ರಿಗಳು ಮುಂದಾಗಿದ್ದು, ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ನ ಸುಮಾರು 30ಮಂದಿ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷಗಿರಿಗೆ ನೇಮಕ ಮಾಡುವ ಸಂಬಂಧ ನಿನ್ನೆ ದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿಣಿ ಸಂದರ್ಭದಲ್ಲಿ ವರಿಷ್ಠರೊಂದಿಗೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವೆಲ್ಲ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಬಹುದು ಎಂಬ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪಟ್ಟಿಯಲ್ಲಿ 30 ಮಂದಿ ಕಾಂಗ್ರೆಸ್ ಶಾಸಕರ ಹೆಸರಿದ್ದು, ಯಾರಿಗೆ ಯಾವ ನಿಗಮ ಮಂಡಳಿ ನೀಡಬಹುದು ಎಂಬ ಬಗ್ಗೆಯೂ ಈ ಪಟ್ಟಿಯಲ್ಲಿ ವಿವರಗಳಿವೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಕಗಳು ತಿಳಿಸಿವೆ.

ನಿನ್ನೆ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಜತೆ ಸಮಾಲೋಚನೆ ನಡೆಸಿದ್ದು, ನಿಗಮ ಮಂಡಳಿಗಳಿಗೆ ಶಾಸಕರು ಹಾಗೂ ಕಾರ್ಯಕರ್ತರನ್ನು ಶೇ.50:50 ಅನುಪಾತದಲ್ಲಿ ನೇಮಕ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟು, ಅದರಂತೆ ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ಪಟ್ಟಿ ನೀಡಿದ್ದಾರೆ.

ಈ ಪಟ್ಟಿಗೆ ಹೈಕಮಾಂಡ್ ವಿಜಯದಶಮಿಯೊಳಗೆ ಒಪ್ಪಿಗೆ ಸಾಧ್ಯತೆ ಇದ್ದು, ವಿಜಯದಶಮಿಗೆ ಹಲವು ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯ ಉಡುಗೊರೆ ಸಿಗುವುದು ನಿಶ್ಚಿತ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಟ್ಟಿಯನ್ನು ಪಡೆದುಕೊಂಡಿರುವ ವರಿಷ್ಠರು ಈ ಪಟ್ಟಿ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕರು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರುಗಳನ್ನು ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ತೀರ್ಮಾನ ಮಾಡಲಾಗಿದ್ದು, ನವರಾತ್ರಿ ಹೊತ್ತಿಗೆ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಪಟ್ಟಿ ಹೊರ ಬೀಳಲಿದೆ.

Related Articles

Back to top button