ಕರಾವಳಿ

ಧಾರಾವಾಹಿಗೂ ಬಂತು ದೈವಾರಾಧನೆ-  ದೈವಾರಾಧಕರ ಎಚ್ಚರಿಕೆ!

Views: 83

ಕಾಂತಾರ ಬಳಿಕ ಪ್ರತಿಯೊಂದು ಕಾರ್ಯಕ್ರಮ ದೈವಾರಾಧನೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಕಾರ್ಯಕ್ರಮಗಳು ಇರಲಾರಂಭಿಸಿದೆ. ಇದೀಗ ಕನ್ನಡ ಖಾಸಗಿ ವಾಹಿನಿಯೊಂದರ ಧಾರಾವಾಹಿನಲ್ಲಿ ದೈವಾರಾಧನೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಶೂಟ್ ಮಾಡಿದ್ದು, ಸ್ವತಃ ಕರಾವಳಿಯ ನಟರೊಬ್ಬರು ಅದರಲ್ಲಿ ನಟಿಸಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ಒಂದು ಇದೀಗ ರೀಲಿಸ್ ಆಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದ್ದು, ಇದೀಗ ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಪ್ರೋಮೋ ಕರಾವಳಿಗಳ ಸಿಟ್ಟಿಗೆ ಕಾರಣವಾಗಿದ್ದು,ಸದ್ಯ ಈಗ ದೈವಾರಾಧನೆ ಪ್ರದರ್ಶನ ಧಾರವಾಹಿಗೂ ವ್ಯಾಪಿಸಿದ್ದು ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ದಿನೇ ದಿನೇ ತುಳುನಾಡು ವಿಶಿಷ್ಟ, ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ದೈವಾರಾಧಕರು ಅಸಮಾಧಾನ ಹೊರ ಹಾಕಿದ್ದಾರೆ.

ಧಾರಾವಾಹಿನಲ್ಲಿ ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಲಾವಿದ ಮಂಗಳೂರಿನ ಪ್ರಶಾಂತ್ ಸಿ.ಕೆ ಹಾಗೂ ಧಾರವಾಹಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಲು ದೈವಾರಾಧಕರು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಧಾರವಾಹಿ ತೆರೆ ಮೇಲೆ ಬರಬಾರದೆಂದು ಪಟ್ಟು ಹಿಡಿದಿದ್ದಾರೆ.

ಧಾರವಾಹಿಯ ಪ್ರೋಮೋ ವಿಡಿಯೋ ವೈರಲ್ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ಚಿತ್ರೀಕರಣಕ್ಕೆ ಸುಳ್ಳು ಹೇಳಿ ಬ್ಯಾಂಡ್ ವಾದ್ಯದವರನ್ನು ಕರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೈವಸ್ಥಾನದಲ್ಲಿ ಕೋಲ ಇದೆ ಎಂದು ಹೇಳಿ ದೇವಸ್ಥಾನದ ಬ್ಯಾಂಡ್ ವಾದ್ಯದವರನ್ನು ಕರೆಸಿದ್ದಾರೆ ಎಂದು ದೈವಾರಾಧಕರ ವೇದಿಕೆ ಧಾರವಾಹಿ ತಂಡದ ಮೇಲೆ ಆರೋಪ ಮಾಡಿದ್ದಾರೆ.

. ಸಿನಿಮಾ, ಧಾರವಾಹಿ ಯಾವುದರಲ್ಲೂ ದೈವಾರಾಧನೆಯನ್ನು ಬಳಸಿಕೊಳ್ಳಬಾರದು. ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ನಡೆಸುತ್ತೇವೆ ಎಂದು ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಧಾರವಾಹಿಯಲ್ಲಿ ದೈವದ ಪಾತ್ರ ನಿರ್ವಹಿಸಿದ ಕಲಾವಿದ ಪ್ರಶಾಂತ್ ಸಿಕೆ ಅವರು ಕರಾವಳಿಗರ ಕ್ಷಮೆ ಕೇಳಿದ್ದು, ಕಲಾವಿದನಾಗಿ ನಾನು ಅದರಲ್ಲಿ ನಟಿಸಿದ್ದೆ, ಇನ್ನು ಮುಂದೆ ಈ ರೀತಿಯ ಯಾವುದೇ ದೈವಾರಾಧನೆಗೆ ಸಂಬಂಧಿಸಿದ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Related Articles

Back to top button