ಧರ್ಮಸ್ಥಳ ಠಾಣೆಯ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಮಾರಣಾಂತಿಕ ಹಲ್ಲೆ

Views: 114
ಕನ್ನಡ ಕರಾವಳಿ ಸುದ್ದಿ: ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಪೊಲೀಸ್ ಬೆಲ್ಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬಯಲಾಗಿದೆ.
ಪತ್ನಿಗೆ ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನಿಸಿರುವ ಆರೋಪದಲ್ಲಿ ಸಿಲುಕಿರುವ ಧರ್ಮಸ್ಥಳ ಠಾಣೆಯ ಪಿಎಸ್‌ಐ ಪಿ.ಕಿಶೋರ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪತಿ, ಕಿಶೋರ್ ಎಸಗಿರುವ ಕ್ರೌರ್ಯದ ಕುರಿತು ದಾಖಲೆ ಹಾಗೂ ವೈದ್ಯಕೀಯ ವರದಿ ಸಮೇತ ಪೊಲೀಸರಿಗೆ ದೂರು ನೀಡಿರುವ ಅವರ ಪತ್ನಿ ವರ್ಷಾ (27) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬೆಂಗಳೂರಿನ ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್. ವರ್ಷಾ ಅವರು ಪತಿ ಧರ್ಮಸ್ಥಳ ಪಿಎಸ್‌ಐ ಪಿ.ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ 14 ವರದಕ್ಷಿಣೆಗಾಗಿ ಕಿರುಕುಳ ನೀಡಿದ ಕುರಿತು ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಾದ ಬೆನ್ನಲ್ಲೇ ಪಿಎಸ್‌ಐ ಕಿಶೋರ್ ರಜೆಯಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ.
ವರದಕ್ಷಿಣೆ ತರುವಂತೆ ಪದೇ ಪದೆ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಿಶೋರ್, ಅವರ ತಂದೆ ಪುಟ್ಟಚನ್ನಪ್ಪ ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್ ವಿರುದ್ದ ಸೋಮವಾರ ಎಫ್ ಐಆರ್ ದಾಖಲಾಗಿತ್ತು.
ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು ಪ್ರಕರಣವನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ.