ಆರ್ಥಿಕ

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ವಿಕಸಿತ ಭಾರತ ಗುರಿ ಸಾಧಿಸುವ ಬಜೆಟ್

Views: 45

ನವದೆಹಲಿ, ಬಡವರು, ಮಹಿಳೆಯರು, ಯುವಜನತೆ ಹಾಗೂ ಅನ್ನದಾತರ ಕಲ್ಯಾಣಕ್ಕೆ ಒತ್ತು ನೀಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಕಸಿತ ಭಾರತದ ಗುರಿ ಸಾಧಿಸುವ ಬಜೆಟ್‌ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು.ಕೇಂದ್ರದ ಬಜೆಟ್‌ನಲ್ಲಿ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಳೆಯ ಆದಾಯ ತೆರಿಗೆ ಪದ್ಧತಿಯಂತೆ 7 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ಮುಂದುವರೆದಿದೆ.ಲೋಕಸಭಾ ಚುನಾನವಣೆಯ ಹೊಸ್ತಿನಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಯಾವುದೇ ಅಗ್ಗದ, ಜನಪ್ರಿಯ ಯೋಜನೆಗಳನ್ನು ಹೆಚ್ಚಾಗಿ ಘೋಷಿಸದೆ, 1 ಕೋಟಿ ಬಡವರ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಯನ್ನು ಮಾಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನ್ನು ಮಂಡಿಸಿ, 2047ರ ವೇಳೆಗೆ ವಿಕಸಿತ ಭಾರತದ ಮಂತ್ರ ಪಠಿಸಿದ್ದಾರೆ.ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತ ರೈತ ನಮ್ಮ ಸರ್ಕಾರದ ನಾಲ್ಕು ಜಾತಿಗಳು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿ, ಈ ವರ್ಗದ ಅಭಿವೃದ್ಧಿಯೇ ಸರ್ಕಾರದ ಆದ್ಯತೆ ಎಂದು ಹೇಳಿದರು.

ತಮ್ಮ ಈ ಬಜೆಟ್‌ನ್ನು ಸರ್ವ ಸ್ಪರ್ಶಿ, ಸರ್ವ ವ್ಯಾಪಿ, ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಕೇಂದ್ರದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಯಾವೆಲ್ಲಾ ವಲಯಗಳಿಗೆ ಆದ್ಯತೆ ನೀಡಿ, ಏನೆಲ್ಲಾ ಸಾಧನೆ ಮಾಡಿದೆ, ಯಾವೆಲ್ಲಾ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಏನೆಲ್ಲಾ ವರ್ಗಗಳಿಗೆ ಈ ಕಾರ್ಯಕ್ರಮಗಳಿಂದ ಲಾಭವಾಗಿದೆ ಎಂಬುದನ್ನೆಲ್ಲಾ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.ರಾಜಕೀಯ ಘೋಷಣೆಯಾಗಿರುವ ಸಾಮಾಜಿಕ ನ್ಯಾಯದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿರುವ ಅವರು, ಸಾಮಾಜಿಕ ನ್ಯಾಯ ಕೆಲವರಿಗೆ ರಾಜಕೀಯ ಘೋಷಣೆಯಾಗಿರಬಹುದು. ಆದರೆ, ನಮಗೆ ಮಾತ್ರ ಸಾಮಾಜಿಕ ನ್ಯಾಯ ಆಡಳಿತ ಮಾದರಿ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದೊಂದಿಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬಜೆಟ್ ಭಾಷಣದಲ್ಲಿ ಪ್ರತಿಪಾದಿಸಿದರು.ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯನ್ನೂ ಮಾಡಿದೆ. ಜತೆ ಜತೆಗೆ ದೇಶದ ಆರ್ಥಿಕ ಸುಧಾರಣೆಯನ್ನು ಮಾಡುವ ಮೂಲಕ 2047ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧಿಸಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಸಂಕಲ್ಪವನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು.ಸಬ್‌ಕಾ ಸಾತ್ ಸಬ್ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ಸರ್ಕಾರ ಹತ್ತು ವರ್ಷಗಳಲ್ಲಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದು ಈ ಎಲ್ಲ ಯೋಜನೆಗಳು ಎಲ್ಲರ ಮನೆ ಮನೆಗೆ ತಲುಪಿವೆ ಎಂದರು.

ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತ ರೈತರ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಅದರಂತೆ ಬಡತನ ನಿರ್ಮೂಲನಗೆ ಮಹಿಳಾ ಸಬಲೀಕರಣಕ್ಕೆ ಯುವಜನರ ಸಾಮರ್ಥ್ಯ ಹೆಚ್ಚಳಕ್ಕೆ ಅನ್ನದಾತ ರೈತನ ಸಶಕ್ತಿಕರಣಕ್ಕೆ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ಬಜೆಟ್‌ನಲ್ಲೂ ಬಡವರು, ಮಹಿಳೆಯರು, ಯುವಕರು ಅನ್ನದಾತ ರೈತನ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ. ಈ ನಾಲ್ಕು ವರ್ಗಗಳು ನಮ್ಮ ಸರ್ಕಾರದ ಆದ್ಯತೆಯ ವರ್ಗಗಳಾಗಿವೆ ಎಂದರು.

ಆಡಳಿತದಲ್ಲಿ ಸ್ವಜನ ಪಕ್ಷಪಾತವನ್ನು ಸಂಪೂರ್ಣವಾಗಿ ಮೆಟ್ಟಿ ನಿಂತು ಸರ್ವ ವರ್ಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ದೇಶದ ಆರ್ಥಿಕ ಸ್ಥಿತಿಯಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಆರ್ಥಿಕ ಅಭಿವದ್ಧಿಯಲ್ಲಿ ಇಡೀ ದೇಶವೇ ಭಾಗಿಯಾಗಿದ್ದು, ಜಿಎಸ್‌ಟಿ ಮೂಲಕ ತೆರಿಗೆ ಕ್ರಾಂತಿ ಮಾಡಲಾಗಿದೆ ಎಂದರು.

ಬಡವರ ಕಲ್ಯಾಣ ಯೋಜನೆ

ಬಡವರ ಕಲ್ಯಾಣ ಯೋಜನೆಗಳಿಂದ 25 ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲಾಗಿದೆ. ಪಿಎಂ ಸ್ವ ನಿಧಿ ಯೋಜನೆಯಿಂದ ಬೀದಿ ವ್ಯಾಪಾರಿಗಳಿಗೆ ಸಹಾಯ ಧನ ಒದಗಿಸಲಾಗಿದೆ. ಪಿಎಂ ಜನಮನ ಯೋಜನೆಯಿಂದ ಬುಡಕಟ್ಟು ಸಮುದಾಯಗಳಿಗೆ ನೆರವು ಒದಗಿಸಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಿಂದ ಎಲ್ಲ ಸಮುದಾಯದ ಏಳ್ಗೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಮಹಿಳೆಯರ ಸಬಲೀಕರಣ

ಮಹಿಳೆಯರ ಸಬಲೀಕರಣಕ್ಕೂ ಒತ್ತು ನೀಡಲಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಈ ಬಜೆಟ್‌ನಲ್ಲಿ 9-14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಾಶಯ ಕ್ಯಾನ್ಸರ್ ತಡೆಗಟ್ಟುವ ಉಚಿತ ಲಸಿಕೆ ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

3 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿ ಮಾಡುವ ಗುರಿಯನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ.

ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಲಾಗಿದ್ದು, ಪಿಎಂ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಶೇ. 70 ರಷ್ಟು ಮಹಿಳೆಯರಿಗೆ ಮನೆ ವಿತರಿಸುವುದಾಗಿ ಹೇಳಿದ್ದಾರೆ. ಅಲ್ಲದೆ ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮೂರನೇ 1 ರಷ್ಟು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದರು.

ತ್ರಿವಳಿ ತಲಾಕ್ ಕಾನೂನು ಜಾರಿಗೊಳಿಸಲಾಗಿದೆ. ಈ ಮೂಲಕ ಮಹಿಳೆಯರ ಘನತೆಯನ್ನು ಹೆಚ್ಚಿಸುವ ಕೆಲಸವೂ ಆಗಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯನ್ನು ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ವಿಸ್ತರಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ಅನ್ನದಾತ ರೈತರ ಕಲ್ಯಾಣ

ಅನ್ನದಾತ ರೈತ ನಮ್ಮ ಮೊದಲ ಆದ್ಯತೆಯಾಗಿದ್ದು, ರೈತರ ಕಲ್ಯಾಣಕ್ಕೆ ರೈತ ಕಿಸಾನ್ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈ ಯೋಜನೆಯ ಲಾಭ 11.28 ಕೋಟಿ ರೈತರಿಗೆ ಸಿಕ್ಕಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ೪ ಲಕ್ಷ ಕೋಟಿ ವಿಮೆಯನ್ನು ರೈತರಿಗೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೂ ಆದ್ಯತೆ ನೀಡಲಾಗಿದ್ದು, ಒನ್ ನೇಷನ್, ಒನ್ ಮಾರ್ಕೆಟ್ ವ್ಯವಸ್ಥೆಯು ಜಾರಿಯಲ್ಲಿದೆ ಎಂದರು.

ಕೃಷಿ ಮತ್ತು ಆಹಾರ ಸಂಸ್ಕರಣ ಮೌಲ್ಯವರ್ಧನೆ ಮತ್ತು ರೈತರ ಆದಾಯ ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಮೀನುಗಾರರ  ಮತ್ಸ್ಯ ಸಂಪದ ಯೋಜನೆ

ಮೀನುಗಾರರ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಮತ್ಸ್ಯ ಸಂಪದ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಹಾಗೆಯೇ ಮೀನುಗಾರರಿಗೆ ಹೊಸ ಮೀನುಗಾರಿಕೆಗೆ ಹೊಸ ಸಚಿವಾಲಯ ಆರಂಭ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಿಸಾನ್ ಸಂಪದ

ಕಿಸಾನ್ ಸಂಪದ ಯೋಜನೆಯಿಂದ 38ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದರು.

ಯುವಜನತೆ ಕಲ್ಯಾಣ

ಯುವಜನತೆ ಕಲ್ಯಾಣಕ್ಕಾಗಿ ಹೊಸ ಶಿಕ್ಷಣ ನೀತಿ ಜಾರಿ ಮಾಡಿ ಕೌಶಲ್ಯ ತರಬೇತಿಗೂ ಒತ್ತು ನೀಡಿದ್ದೇವೆ. 1.4 ಕೋಟಿ ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದ್ದು, ಹೊಸ ಹೊಸ ಉದ್ಯೋಗಗಳನ್ನು ಯುವ ಜನರಿಗೆ ಒದಗಿಸಲಾಗಿದೆ ಎಂದರು.

ದೇಶದಲ್ಲಿ ಹೊಸದಾಗಿ 391 ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. 3ಸಾವಿರ ಐಐಟಿ, ಐಐಎಂ, ಎಐಎಂಎಸ್ ನಂತಹ ಉನ್ನತ ಶಿಕ್ಷಣದ ಸಂಸ್ಥೆಗಳನ್ನು ಆರಂಭಿಸಲಾಗಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದರು.

ಮುದ್ರಾ ಯೋಜನೆಯಡಿ 43 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಮುದ್ರಾ ಯೋಜನೆಯ ಫಲಾನುಭವಿಗಳು ಉದ್ಯೋಗದಾತರಾಗಿದ್ದಾರೆ ಎಂದರು.

ಭ್ರಷ್ಟಾಚಾರಕ್ಕೆ ಇತಿಶ್ರೀ

ದೇಶದ ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲಾಗಿದೆ. ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ನಾವು ಮಾಡಿರುವ ಅಭಿವೃದ್ಧಿ, ದೇಶದ ಪ್ರಗತಿ ಎಲ್ಲವನ್ನು ಜನ ಮೆಚ್ಚಿದ್ದಾರೆ. ನಮ್ಮ ಈ ಉತ್ತಮ ಕೆಲಸ, ಆಡಳಿತದಿಂದ ಮತ್ತೆ ನಮಗೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದರು.

ಮಹಿಳೆಯರ ಕಲ್ಯಾಣಕ್ಕೆ ಒತ್ತು ನೀಡಿದ್ದೇವೆ. ಮಹಿಳೆಯರು ಉದ್ಯಮ ಸ್ಥಾಪಿಸಲು ನೆರವಾಗಿದ್ದೇವೆ. 3 ಕೋಟಿ ಮಹಿಳೆಯರನ್ನು ಲಕ್‌ಪತಿ ದೀದಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜತೆಗೆ ಜೈ ಅನುಸಂಧಾನ್ ಘೋಷಣೆಯನ್ನು ರೂಢಿಸಿಕೊಂಡು ಸಂಶೋಧನೆ, ತಂತ್ರಜ್ಞಾನ, ಕ್ಷೇತ್ರಗಳಿಗೂ ಒತ್ತು ನೀಡುವುದಾಗಿ ಅವರು ಹೇಳಿ, ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 6ನೇ ಬಜೆಟ್ ಮಂಡಿಸುವ ಮೂಲಕ ಸತತ 6ನೇ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ವಿತ್ತ ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದರು.

ಕೇಂದ್ರದ ವಿತ್ತ ಸಚಿವರಾಗಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸತತ 6 ಬಜೆಟ್‌ಗಳನ್ನು ಮಂಡಿಸಿದ್ದರು. ಈ ದಾಖಲೆಯನ್ನು ಇಂದು ಸರಿಗಟ್ಟಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 6ನೇ ಬಜೆಟ್‌ನ್ನು ಲೋಕಸಭೆಯಲ್ಲಿಂದು ಮಂಡಿಸಿದರು.

ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೂ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದಾರೆ.

ಮೂಲಭೂತ ಸೌಕರ್ಯಕ್ಕೆ ಒತ್ತು

ಕೇಂದ್ರದ ಬಜೆಟ್‌ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದ್ದು, ರಸ್ತೆ ಅಭಿವೃದ್ಧಿ, ರೈಲ್ವೆ, ವಿಮಾನಯಾನ, ಮೆಟ್ರೋ ಸಂಪರ್ಕದ ಉನ್ನತೀಕರಣದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಹಾಗೆಯೇ ವಿದ್ಯುತ್ ಚಾಲಿತ ವಾಹನಗಳ ಬಳಕೆಗೂ ಬಜೆಟ್‌ನಲ್ಲಿ ಒತ್ತು ನೀಡುವ ಅಂಶಗಳಿವೆ.

ದೇಶದ ಸಣ್ಣ ಸಣ್ಣ ನಗರಗಳಿಗೂ ಮೆಟ್ರೋ ಸಂಪರ್ಕದ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದ್ದು, ಒಂದೇ ಭಾರತ್ ರೈಲುಗಳ ಓಡಾಟ ಸಂಖ್ಯೆಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. 40 ಸಾವಿರ ರೈಲ್ವೆ ಬೋಗಿಗಳ ಉನ್ನತೀಕರಣದ ಘೋಷಣೆ ಮಾಡಲಾಗಿದೆ.

ಸಣ್ಣ ನಗರಗಳಲ್ಲಿ ಮೆಟ್ರೋ ಸಂಪರ್ಕ ವಿಸ್ತರಿಸುವ ಮೆಟ್ರೋ ನಮೋ ಭಾರತ್ ಯೋಜನೆಯ ಘೋಷಣೆ ಮೂಲಕ ನಗರಗಳ ಮೆಟ್ರೋ ರೈಲುಗಳ ವಿಸ್ತರಣೆಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ವಸತಿಗೆ ಆದ್ಯತೆ

ಕೇಂದ್ರದ ಈ ಬಜೆಟ್‌ನಲ್ಲಿ ವಸತಿಗೆ ಆದ್ಯತೆ ನೀಡಲಾಗಿದ್ದು, ಐದು ವರ್ಷಗಳಲ್ಲಿ ಮೂರು ಕೋಟಿ ಮನೆ ನಿರ್ಮಾಣದ ಗುರಿಯನ್ನು ಪ್ರಕಟಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಿ, ಶೇ. 70 ರಷ್ಟು ಮಹಿಳೆಯರಿಗೆ ಮನೆ ವಿತರಿಸುವ ಗುರಿಯನ್ನು ಬಜೆಟ್‌ನಲ್ಲಿ ಹೇಳಲಾಗಿದೆ.

Related Articles

Back to top button