ಡಿಕೆಶಿಗೆ ಮತ್ತೆ ಸಿಬಿಐ ಸಂಕಷ್ಟ,ಜ.11ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

Views: 37
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.ಕೇರಳ ಮೂಲದ ಜೈಹಿಂದ್ ಜಾನಲ್‌ನ ಹೂಡಿಕೆ ಸಂಬಂಧ ಸಿಬಿಐ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ 30 ಮಂದಿಗೆ ನೋಟಿಸ್ ಜಾರಿ ಮಾಡಿ ಜನವರಿ 11 ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚನೆ ನೀಡಿದೆ.
ನಿನ್ನೆಯಷ್ಟೇ ಜೈಹಿಂದ್ ಚಾನಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಅವರಿಗೆ ಬೆಂಗಳೂರಿನ ಸಿಬಿಐ ಕಚೇರಿಯಿಂದ ನೋಟಿಸ್ ಜಾರಿ ಮಾಡಿ ಜೈಹಿಂದ್ ಚಾನಲ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಹೂಡಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸಿಬಿಐ ಹೇಳಿತ್ತು.
ಈ ಬೆನ್ನಲ್ಲೆ ಸಿಬಿಐ ಇಂದು ಡಿ.ಕೆ.ಶಿವಕುಮಾರ್ ಅವರ ಪತ್ನಿ ಸೇರಿದಂತೆ ಶಿವಕುಮಾರ್ ಅವರ ಜತೆ ವ್ಯವಹಾರಿಕವಾಗಿ ಪಾಲುದಾರಿಕೆ ಹೊಂದಿರುವ 30ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಜಾರಿ ಮಾಡಿದೆ.
ಸಿಬಿಐ ನೋಟಿಸ್ ಜಾರಿ ಮಾಡಿರುವ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ಜ. 11 ರಂದು ವಿಚಾರಣೆಗೆ ಹಾಜರಾಗುವಂತೆಯೂ ಸಿಬಿಐ ನೋಟಿಸ್‌ನಲ್ಲಿ ಸೂಚಿಸಿದೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆ ನಡೆಸುತ್ತಿದ್ದು, 2017-2018ರ ಅಫಿಡೆವಿಟ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಜೈಹಿಂದ್ ವಾಹಿನಿಯಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್ 91ರ ಅಡಿಯಲ್ಲಿ ಜೈಹಿಂದ್ ಚಾನಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ನಂತರ ಡಿ.ಕೆ. ಶಿವಕುಮಾರ್ ಮತ್ತು ಅವರ ಪತ್ನಿ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ನೋಟಿಸ್‌ನ್ನು ಜಾರಿ ಮಾಡಿರುವ ಸಿಬಿಐ ಇವರುಗಳು ಮಾಡಿದ ಹೂಡಿಕೆಗಳ ವಿವರ, ಪಾವತಿಸಿರುವ ಲಾಭಾಂಶ, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ವಿವರಗಳನ್ನು ನೀಡಬೇಕು. ಅಲ್ಲದೆ ಜೈಹಿಂದ್ ಟಿವಿ ಹೆಸರಿನಲ್ಲಿ ಮಾಡಿದ ಬ್ಯಾಂಕ್ ವಹಿವಾಟುಗಳ ವಿವರಗಳು, ಲೆಡ್ಜರ್, ಖಾತೆಗಳು, ಒಪ್ಪಂದದ ಟಿಪ್ಪಣಿ ವಿವರ ನೀಡಲು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಡಿ.ಕೆ. ಶಿವಕುಮಾರ್ ವಿರುದ್ಧ 2020ರಲ್ಲಿ ಸಿಬಿಐ ಪ್ರಕರಣ ದಾಖಲಿಸಿದ್ದು, 2013 ಮತ್ತು 2018ರ ನಡುವೆ ಡಿ.ಕೆ. ಶಿವಕುಮಾರ್ ಅವರು 74 ಕೋಟಿಗೂ ಹೆಚ್ಚು ಆಸ್ತಿ ಗಳಿಸಿದ್ದು, ಈ ಆಸ್ತಿ ಅವರ ಆದಾಯಕ್ಕೆ ಅನುಗುಣವಾಗಿಲ್ಲ. ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ನವೆಂಬರ್ 20 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ವಿರುದ್ದ ಸಿಬಿಐ ತನಿಖೆ ನಡೆಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಜನವರಿ 5 ರಂದು ಈ ಅರ್ಜಿಯ ವಿಚಾರಣೆ ಇದೆ. ಇದೆಲ್ಲದರ ನಡುವೆಯೇ ಸಿಬಿಐ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ನೋಟಿಸ್ ಜಾರಿ ಮಾಡಿದೆ.