ಜನುಮದ ಅನುಬಂಧ ಬೆಸೆಯಲು”ಯಕ್ಷ ಮಂತ್ರ ಮಾಂಗಲ್ಯ”ವೈವಾಹಿಕ ಬದುಕಿಗೆ ಕಾಲಿಟ್ಟ ಅಪರೂಪದ ಜೋಡಿ!

Views: 96
ಉಡುಪಿಯ ಜೋಡಿಯೊಂದು ಕುವೆಂಪು ಪರಿಕಲ್ಪನೆಯ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಕರಾವಳಿಯ ಯಕ್ಷಗಾನ ರೀತಿಯ ಪ್ರಸಾದ್ ಚೇರ್ಕಾಡಿ ಕೀರ್ತನಾ ಉದ್ಯಾವರ ಮದುವೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ನೂಜಿನಬೈಲು ಎಂಬ ಹಳ್ಳಿ. ಭಾಗವತರು ಮೇಲಿನ ಈ ಹಾಡನ್ನು ಚೆಂಡೆ ಮದ್ದಳೆಯ ನಿನಾದದೊಂದಿಗೆ ಯಕ್ಷಗಾನ ಬಯಲಾಟಕ್ಕೆ ಎಂದಿನಂತೆ ಹಾಕುವ ನಾಲ್ಕು ಕಂಬಗಳ ರಂಗಸ್ಥಳವೂ ಇತ್ತು. ಆದರೆ, ಆ ದಿನ ಅವರು ಕಾದದ್ದೇ ಬಂತು. ರಂಗಸ್ಥಳದಲ್ಲಿ ವೇಷಗಳೇನೂ ಕಾಣಿಸುತ್ತಿಲ್ಲ. ಸಿಂಗಾರಗೊಂಡಿರುವ ಗಂಡು-ಹೆಣ್ಣು ಮಧ್ಯೆ ಕೂತಿದ್ದಾರೆ, ಅಕ್ಕ ಪಕ್ಕದಲ್ಲಿ ಹಿರಿಯರಿಬ್ಬರು ಕೂತಿದ್ದಾರೆ.
ಈ ರಂಗಸ್ಥಳದ ವಿಶೇಷತೆ ಎಂದರೆ ಅದು ಯಕ್ಷಗಾನ ಅಲ್ಲ; ಅಲ್ಲಿ ನಡೆದದ್ದು ಯಕ್ಷ ಮಂತ್ರ ಮಾಂಗಲ್ಯ. ಮೂಲತಃ ಕರಾವಳಿಯವರೇ ಆಗಿದ್ದುಕೊಂಡು ಬೆಂಗಳೂರಿನಲ್ಲಿ ನೆಲಸಿರುವ ಪ್ರಸಾದ್ ಚೇರ್ಕಾಡಿ ಮತ್ತು ಕೀರ್ತನಾ ಉದ್ಯಾವರ ಈಗ ಜನುಮದ ಅನುಬಂಧವನ್ನು ಬೆಸೆಯಲು ಆಯ್ಕೆ ಮಾಡಿಕೊಂಡಿದ್ದು ಈ ಯಕ್ಷ ಮಂತ್ರ ಮಾಂಗಲ್ಯ ವಿಧಾನವನ್ನು. ಪ್ರಸಾದ್ ಚೇರ್ಕಾಡಿ ಅವರು ಸ್ಕ್ರಿಪ್ಟ್ ರೈಟರ್ ಆಗಿ, ಚಲನಚಿತ್ರ, ಕಿರುತೆರೆ ನಟನಾಗಿ, ಯಕ್ಷಗಾನ ಕಲಾವಿದನಾಗಿ ಮತ್ತು ಗುರುವಾಗಿ ಹೆಸರು ಮಾಡುತ್ತಿದ್ದರೆ, ಕೀರ್ತನಾ ಅವರು ಯಕ್ಷಗಾನ, ಭರತನಾಟ್ಯ, ಯೋಗ ಗುರುವಾಗಿ ತೊಡಗಿಸಿಕೊಂಡಿರುವ ಬಹುಮುಖೀ ಪ್ರತಿಭೆ. ಇಬ್ಬರೂ ಬಾಲ್ಯದಿಂದಲೇ ಕುವೆಂಪು ಸಾಹಿತ್ಯದಿಂದ ಪ್ರಭಾವಿತರಾದವರು ಮತ್ತು ಅವರಿಬ್ಬರನ್ನೂ ಬೆಸೆದದ್ದು ಯಕ್ಷಗಾನವೇ.
ಯಕ್ಷ ಮಂತ್ರ ಮಾಂಗಲ್ಯ ಹೆಸರಿನಲ್ಲೀಗ ನಡೆದಿದೆ. ಈ ಮೂಲಕ 1966ರಲ್ಲಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ಅವರ ವಿವಾಹದಿಂದಾರಂಭಿಸಿ, ತೀರಾ ಇತ್ತೀಚೆಗೆ ನಟಿ ಪೂಜಾ ಗಾಂಧಿ, ಚಾಮರಾಜ ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮುಂತಾದವರ ಸಾಲಿನಲ್ಲಿ ಈ ನೂತನ ವಧು ವರರೂ ತಮ್ಮ ವೈವಾಹಿಕ ಬದುಕಿಗೆ ಕಾಲಿಟ್ಟರು.
ಮಂತ್ರಮಾಂಗಲ್ಯ ವಿವಾಹಕ್ಕೆ ನಿಗದಿಪಡಿಸಿರುವ 21 ಪ್ರತಿಜ್ಞಾ ವಿಧಿಗಳು 9 ರೀತಿಯಲ್ಲಿ ರಾಗ, ತಾಳ, ಛಂದಸ್ಸುಗಳ ಸಹಿತವಾಗಿ ಯಕ್ಷಗಾನ ಹಾಡುಗಳ ರೂಪ ತಳೆದಿವೆ. ಈ ಮಂತ್ರಮಾಂಗಲ್ಯದ ಪ್ರತಿಜ್ಞೆಗಳನ್ನೇ ಪದ್ಯರೂಪಕ್ಕೆ ಪರಿವರ್ತಿಸಿ, ಮಟ್ಟು ನಿರ್ಣಯಿಸಿ ಸಾಹಿತ್ಯ ಬರೆದವರು ಛಾಂದಸ ಕವಿ ಗಣೇಶ್ ಕೊಲೆಕಾಡಿ. ತೀರಾ ಅನಾರೋಗ್ಯದಲ್ಲಿದ್ದರೂ ತಮ್ಮ ಶಿಷ್ಯರಿಬ್ಬರ ಮೇಲಿನ ಪ್ರೀತಿಯಿಂದ ಈ ಮಂತ್ರ ಮಾಂಗಲ್ಯದ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ.
ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು. ಒಂದು ರೀತಿಯಲ್ಲಿ ಯಕ್ಷಗಾನದ ಮತ್ತೊಂದು ರೂಪವಾಗಿರುವ ತಾಳಮದ್ದಳೆಯಂತೆಯೇ ಇದು ಭಾಸವಾಯಿತು. ಯಕ್ಷ ಮಂತ್ರ ಮಾಂಗಲ್ಯ ಆರಂಭಕ್ಕೆ ಮುನ್ನ, ಯಕ್ಷಗಾನದ ಚೌಕಿಯಲ್ಲಿ ಸಾಂಪ್ರದಾಯಿಕವಾಗಿ ‘ಗಜಮುಖದವಗೆ ಗಣಪಗೆ’ ಎಂಬ ಯಕ್ಷಗಾನದ ಸ್ತುತಿ ಪದ್ಯದ ಬಳಿಕ, ಯಕ್ಷಗಾನದ ವಿದ್ಯಾರ್ಥಿಗಳೆಲ್ಲರೂ ಮದುಮಕ್ಕಳನ್ನು ‘ಧಿಮಿತಕಿಟ ತದ್ದಿಮಿತ ದಿಂಧತ್ತೈ’ ಪರಂಪರೆಯ ನಡೆಯ ‘ದಿಬ್ಬಣದ’ ಮೂಲಕ ಚೆಂಡೆ-ಮದ್ದಳೆ ನುಡಿತದೊಂದಿಗೆ ವಿವಾಹ ನಡೆಯುವ ರಂಗಸ್ಥಳಕ್ಕೆ ಕರೆತಂದರು. ಬಾಲಗೋಪಾಲ ಹಾಗೂ ಡೌರು ವೇಷಧಾರಿಗಳು ಜೊತೆಯಾಗಿದ್ದರು. ಇದಕ್ಕೆ ‘ಮುಕ್ತಾಯ’ ನುಡಿಸಿದ ಬಳಿಕ, ಪ್ರಸಾದ್-ಕೀರ್ತನಾ ಕಲ್ಯಾಣ!
ಇಡೀ ಕಾರ್ಯಕ್ರಮವನ್ನು ರಂಗಕರ್ಮಿ ನಾಗೇಶ್ ಉದ್ಯಾವರ ನಿರ್ವಹಿಸಿದರೆ, ಅವರೊಂದಿಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಆಳ್ವಾಸ್ ಪ್ರತಿಷ್ಠಾನದ ಎಂ. ಮೋಹನ್ ಆಳ್ವ, ಕಲಾವಿದ ಪೇತ್ರಿ ಮಾಧವ ನಾಯ್ಕ್, ರಂಗ ಕಲಾವಿದೆ ಶರಣ್ಯಾ ರಾಂಪ್ರಕಾಶ್, ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ, ಸ್ಥಳೀಯ ಹಿರಿಯಜ್ಜಿ ವಿಮಲಾ ದೊಡ್ಡಯ್ಯ, ಕೀರ್ತನಾರ ಹೆತ್ತವರಾದ ಸುನಂದಾ ಮತ್ತು ಕುಶಲ, ಪ್ರಸಾದರ ತಾಯಿ ಸುಶೀಲಾ – ಇವರೆಲ್ಲರೂ ಹಾಡುಗಳಿಗೆ ಅರ್ಥ ಹೇಳುವ ರೀತಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು.