ಜನಮನ

ಚೆನ್ನೈ -ಬೆಂಗಳೂರು -ಮೈಸೂರು ಅತಿವೇಗದ ಬುಲೆಟ್‌ ರೈಲು  ಬರಲಿದೆ..

Views: 45

ಬೆಂಗಳೂರು: ಭಾರತದಲ್ಲಿ ರೈಲು ಪ್ರಯಾಣದ ಸ್ವರೂಪವನ್ನೇ ಬದಲಾಯಿಸಲು ಈಗಿನ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಸಾಮಾನ್ಯ, ವೇಗದೂತ ರೈಲುಗಳ ಜತೆಯಲ್ಲಿ ನಾಲ್ಕೈದು ವರ್ಷಗಳಿಂದ ಸಂಚರಿಸುತ್ತಿರುವ ವಂದೇ ಭಾರತ್‌ ರೈಲು ಕೂಡ ಸೇರಿದೆ. ಇದರ ಮುಂದುವರೆದ ಭಾಗವಾಗಿ ದೇಶದ ಪ್ರಮುಖ ನಗರಗಳಲ್ಲಿ ಬುಲೆಟ್‌ ರೈಲುಗಳನ್ನು ಪರಿಚಯಿಸುವ ಉದ್ದೇಶವೂ ಕೇಂದ್ರ ಸರ್ಕಾರಕ್ಕಿದೆ. ಇದಕ್ಕಾಗಿಯೇ ಚೆನ್ನೈ ಬೆಂಗಳೂರು ಮೈಸೂರು ನಡುವಿನ ಹೈಸ್ಪೀಡ್‌ ಯೋಜನೆಯನ್ನೂ ರೂಪಿಸಲಾಗುತ್ತಿದೆ.

ಭಾರತದಲ್ಲಿ ಮೊದಲ ಬುಲೆಟ್‌ ರೈಲು ಮುಂಬೈ ಹಾಗೂ ಅಹಮದಾಬಾದ್‌ ನಗರಗಳ ನಡುವೆ ಸಂಚರಿಸುವ ಸಾಧ್ಯತೆ ಅಧಿಕವಾಗಿದೆ. ಈ ಮಾರ್ಗದ ಪರಿಶೀಲನೆ, ಭೂಸ್ವಾಧೀನ, ಖರ್ಚಿನ ಲೆಕ್ಕಾಚಾರ, ವಿಸ್ತೃತ ಯೋಜನೆ ತಯಾರಿ ಚಟುವಟಿಕೆಗಳು ನಡೆದಿವೆ. ಈ ಬುಲೆಟ್‌ ರೈಲು ಯೋಜನೆ ಮಾರ್ಗ ಯಶಸ್ವಿಯಾದರೆ ಚೆನ್ನೈ ಬೆಂಗಳೂರು ಮೈಸೂರು ಹೈಸ್ಪೀಡ್‌ ಬುಲೆಟ್‌ ರೈಲು ಯೋಜನೆಯೂ ಎರಡನೇ ಹಂತದಲ್ಲಿ ಅನುಷ್ಠಾನಕ್ಕೆ ಬರಬಹುದು. ಈ ನಿಟ್ಟಿನಲ್ಲಿ ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೊರೇಷನ್‌ ( NHSRCL) ಸಮೀಕ್ಷೆ ಸಹಿತ ಹಲವು ಚಟುವಟಿಕೆಗಳ ಗುತ್ತಿಗೆ ನೀಡಲು ಮುಂದಾಗಿದೆ ಎಂದು ಮನೀ ಕಂಟ್ರೋಲ್‌ ವರದಿ ಮಾಡಿದೆ.

ಚೆನ್ನೈ ಬೆಂಗಳೂರು ಮೈಸೂರು ಹೈಸ್ಪೀಡ್‌ ಬುಲೆಟ್‌ ರೈಲು ಯೋಜನೆ ಹೀಗಿದೆ

ಇದು 435 ಕಿ,ಮಿ ಕ್ರಮಿಸುವ ಚೆನ್ನೈ- ಬೆಂಗಳೂರು- ಮೈಸೂರು ಯೋಜನೆ. ದಕ್ಷಿಣ ಭಾರತದ ಪ್ರಮುಖ ನಗರಿ ಚೆನ್ನೈ, ಐಟಿ ನಗರಿ ಬೆಂಗಳೂರು ಹಾಗೂ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಅನ್ನು ಸಂಪರ್ಕಿಸಲಿದೆ.

ಈ ಅತಿವೇಗದ ರೈಲಿನಿಂದ ಮೂರೂ ನಗರಗಳ ಪ್ರಯಾಣ ಸಮಯ ಬಹಳಷ್ಟು ತಗ್ಗಲಿದ್ದು, ವಹಿವಾಟು ವೃದ್ದಿಯೂ ಇದು ದಾರಿಯಾಗಲಿದೆ.

ಗಂಟೆಗೆ 350 ಕಿ.ಮಿ ವೇಗದಲ್ಲಿ ಈ ರೈಲು ಸಂಚರಿಸಲಿದೆ. ಮೈಸೂರು ಹಾಗೂ ಚೆನ್ನೈ ನಗರಗಳ ನಡುವಿನ ಸಂಚಾರ ಸಮಯ 2 ಗಂಟೆ 25ಕ್ಕೆ ಇಳಿಕೆಯಾಗಲಿದೆ. ಸದ್ಯ ವೇಗದೂತ ಹಾಗೂ ಸಾಮಾನ್ಯ ರೈಲುಗಳ ಸಂಚಾರ ಒಂಬತ್ತು ತಾಸು ಇದ್ದರೆ, ವಂದೇ ಭಾರತ್ ರೈಲು 6 ಗಂಟೆ 30 ನಿಮಿಷದ ಅವಧಿಯನ್ನು ತೆಗೆದುಕೊಳ್ಳಲಿದೆ. ಇದರಿಂದ ನಾಲ್ಕು ಗಂಟೆಗಳ ಸಮಯ ಉಳಿತಾಯವಾಗಲಿದೆ. ಬೆಂಗಳೂರು ಹಾಗೂ ಚೆನ್ನೈ ನಡುವಿನ ಸಂಚಾರ ಅವಧಿ ಒಂದೂವರೆ ಗಂಟೆ ಆಗಬಹುದು.

ಈ ರೈಲು ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಂಚರಿಸಲಿದೆ. ಒಂಬತ್ತು ಕಡೆ ನಿಲ್ಲುವ ಸಾಧ್ಯತೆಯಿದೆ. ಅದರಲ್ಲಿ ಚೆನ್ನೈ, ಪೂನಮಲ್ಲೀ, ಅರಕ್ಕೋಂಣ, ಚಿತ್ತೂರು, ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರಿನಲ್ಲಿ ನಿಲುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಈ ಯೋಜನೆ ಜಾರಿ ವಿಚಾರವಾಗಿ ಈಗಾಗಲೇ ಹಲವಾರು ಸಂಸ್ಥೆಗಳು ಸ್ಥಳ ಪರಿಶೀಲನೆ ಕೂಡ ಮಾಡಿವೆ. ವಂದೇ ಭಾರತ್‌ ರೈಲು ಸಂಚಾರವನ್ನು ಇದೇ ಮಾರ್ಗದಲ್ಲಿ ಜಾರಿಗೊಳಿಸಿದ ನಂತರ ರೈಲ್ವೆ ತಿರುವುಗಳಲ್ಲಿಯೂ ಭಾರೀ ಬದಲಾವಣೆಯಾಗಿದ್ದು, ಇನ್ನಷ್ಟು ಬದಲಾವಣೆ ಯಾದರೆ ಬುಲೆಟ್‌ ರೈಲು ಈ ಮಾರ್ಗದಲ್ಲಿ ಸಂಚರಿಸಲು ಸಹಕಾರಿಯಾಗಲಿದೆ.

Related Articles

Back to top button