ಸಾಂಸ್ಕೃತಿಕ

‘ಚಂದಕಿಂತ ಚಂದ.. ನೀನೇ ಸುಂದರ’.. ಗಾಯಕ ಪಂಕಜ್​ ಉಧಾಸ್​ ಇನ್ನಿಲ್ಲ

Views: 63

ಸುದೀಪ್ ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡಿದ ಜನಪ್ರಿಯ ಗಾಯಕ ಪಂಕಜ್​ ಉಧಾಸ್​ ಅವರು ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 73ರ ಪ್ರಾಯದ ಅವರು ಇಂದು (ಫೆ.26) ನಿಧನರಾದರು.

ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್​ ಉಧಾಸ್​ ಖಚಿತಪಡಿಸಿದ್ದಾರೆ. 1980ರ ದಶಕದಲ್ಲಿ ಪಂಕಜ್​ ಉಧಾಸ್​ ಅವರು ಗಝಲ್​ ಗಾಯನದ ಮೂಲಕ ಫೇಮಸ್​ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್​ನ ಅನೇಕ ಸೂಪರ್​ ಹಿಟ್​ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್​ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು

ಪಂಕಜ್​ ಉಧಾಸ್​ ಅವರ ಅಗಲಿಕೆಗೆ ಕನ್ನಡ ನಾಡಿನ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.

ಹಲವಾರು ಆಲ್ಬಂ ಗೀತೆಗಳಿಗೆ ಪಂಕಜ್​ ಉಧಾಸ್​ ಧ್ವನಿಯಾಗಿದ್ದರು. ಅವರದ್ದು ಸಂಗೀತಗಾರರ ಕುಟುಂಬ. ಅವರ ಸಹೋದರರಾದ ಮನ್​ಹರ್​ ಉಧಾಸ್​, ನಿರ್ಮಲ್​ ಉಧಾಸ್​ ಅವರು ಕೂಡ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. 1986ರಲ್ಲಿ ತೆರೆಕಂಡ ‘ನಾಮ್​’ ಸಿನಿಮಾದಲ್ಲಿನ ‘ಚಿಟ್ಟಿ ಆಯಿ ಹೈ..’ ಹಾಡಿಗೆ ಧ್ವನಿ ನೀಡುವ ಮೂಲಕ ಪಂಕಜ್​ ಉಧಾಸ್​ ಅವರು ಬಹಳ ಜನಪ್ರಿಯತೆ ಪಡೆದರು. ಸಂಜಯ್​ ದತ್​ ಅಭಿನಯದ ಆ ಸಿನಿಮಾದಲ್ಲಿ ಪಂಕಜ್​ ಅವರು ಗಾಯಕನಾಗಿ ಕಾಣಿಸಿಕೊಂಡಿದ್ದರು.

2006ರಲ್ಲಿ ಪಂಕಜ್ ಉಧಾಸ್​ ಅವರಿಗೆ ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೇ, ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಪಂಕಜ್​ ಉಧಾಸ್​ ಅವರನ್ನು ಅರಸಿ ಬಂದಿದ್ದವು. ಭಾರತದ ಮಾತ್ರವಲ್ಲದೇ ವಿದೇಶದ ಹಲವು ವೇದಿಕೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು. ಲೆಜೆಂಡರಿ ಗಾಯಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದರು

 

 

 

 

Related Articles

Back to top button