ಗ್ರಾಮ ಸಹಾಯಕರ ವರ್ಗಾವಣೆಗೆ ಕಾಳಾವರ, ಕೊರ್ಗಿ ಗ್ರಾಮಸ್ಥರ ಆಕ್ರೋಶ

Views: 123
ಕುಂದಾಪುರ: ತಾಲೂಕಿನ ಕಾಳಾವರ ಹಾಗೂ ಕೊರ್ಗಿ ಗ್ರಾಮದ ಕಂದಾಯ ಅಧಿಕಾರಿಗಳ ಕಚೇರಿ ಕಾಳಾವರದಲ್ಲಿದ್ದು, ಅವರಿಗೆ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ಹೊಂಬಾಡಿ-ಮಂಡಾಡಿ ಗ್ರಾಮವನ್ನು ನಿಯೋಜಿಸಿದ್ದು, ಕಾಳಾವರ ಕೊರ್ಗಿ ಗ್ರಾಮಸ್ಥರಿಗೆ ದೈನಂದಿನ ಕೆಲಸಕ್ಕೆ ತೊಂದರೆಯಾಗಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಳಾವರ ಗ್ರಾಮ ಕಚೇರಿಯ ದೈನಂದಿನ ಕಾರ್ಯಕ್ಕೆ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಇಲ್ಲಿನ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದ್ದು, ಗ್ರಾಮ ಸಹಾಯಕರನ್ನು ಮರಳಿ ನೇಮಿಸುವಂತೆ ಸೂಕ್ತ ಕ್ರಮಕ್ಕಾಗಿ ಅಗ್ರಹಿಸಿದ್ದಾರೆ.
ಕಂದಾಯ ಅಧಿಕಾರಿಗಳು ವಾರದಲ್ಲಿ ಮೂರು ದಿನ ಮಾತ್ರ ಕಾಳಾವರದಲ್ಲಿ ಲಭ್ಯವಿದ್ದು ಜನರು ಹಾಗೂ ಗ್ರಾಮ ಆಡಳಿತ ಅಧಿಕಾರಿ ನಡುವೆ ಸೇತುವೆಯಾಗಿ ಗ್ರಾಮ ಸಹಾಯಕರು ಕೆಲಸ ಮಾಡುತ್ತಿರುವುದರಿಂದ ಈಗ ಒಂದು ತಿಂಗಳಿಂದ ಗ್ರಾಮ ಸಹಾಯಕರನ್ನು ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ತಹಸಿಲ್ದಾರರು ಆದೇಶಿಸಿರುವುದು ಕೊರ್ಗಿ ಮತ್ತು ಕಾಳಾವರ ಗ್ರಾಮಸ್ಥರಿಗೆ ತೊಂದರೆ ಉಂಟು ಮಾಡಿದೆ.
ಕಾಳಾವರ ಗ್ರಾಮದ ಕಚೇರಿ ವಾರದಲ್ಲಿ ನಾಲ್ಕು ದಿನ ಮುಚ್ಚಿರುವುದರಿಂದ ಸ್ಥಳೀಯ ಜನರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಎದುರಾದ ತೊಂದರೆ ನಿಭಾಯಿಸುವಂತೆ ಕೋರಿರುತ್ತಾರೆ. ಅಲ್ಲದೇ ಗ್ರಾಮ ಸಹಾಯಕರನ್ನು ಮರಳಿ ಗ್ರಾಮಕ್ಕೆ ಕಳುಹಿಸಲು ಮನವಿಯಲ್ಲಿ ವಿನಂತಿಸಿರುತ್ತಾರೆ.