ಕರಾವಳಿ

ಗೆಳೆಯರೊಂದಿಗೆ ನಾಪತ್ತೆಯಾಗಿದ್ದ  ಬೆಳ್ತಂಗಡಿ ಯುವಕ;  ಪ್ರಕರಣ ಸುಖಾಂತ್ಯ

Views: 1

ಬೆಳ್ತಂಗಡಿ: ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಗೆಳೆಯರೊಂದಿಗೆ ತೆರಳಿದ ವೇಳೆ ನಾಪತ್ತೆಯಾಗಿದ್ದ ದೀಕ್ಷಿತ್‌ನನ್ನು ಊರವರು ಮನೆಯ ಹತ್ತಿರದ ಮೋರಿಯ ಬಳಿ ಪತ್ತೆ ಹಚ್ಚಿ ಮನೆಗೆ ಸೇರಿಸುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ದೀಕ್ಷಿತ್ ಪೂಜಾರಿ , ಸಂಪಾಜೆ ನಿವಾಸಿ ದೀಕ್ಷಿತ್ ಗೌಡ, ಜಾರ್ಲೋಟ್ಟು ನಿವಾಸಿ ಕಿರೋತ್ ಪೂಜಾರಿ, ಅಡೆಂಕಿಲೊಟ್ಟು ನಿವಾಸಿ ಸುದರ್ಶನ್ ಗೌಡ ನಾಲ್ಕು ಜನ ಒಂದೇ ಊರಿನವರಾಗಿದ್ದು ಇವರೆಲ್ಲ ದೇವರ ಮನೆಗೆ ಕಾರಿನಲ್ಲಿ ಹೋಗಿದ್ದರು. ಪ್ರವಾಸ ಮುಗಿಸಿ ಹಿಂದಿರುಗುವಾಗ ಕುಡಿದ ಮತ್ತಿನಲ್ಲಿದ್ದ ಯುವಕರು ಹೊಡೆದಾಡಿಕೊಂಡಿದ್ದರು. ಕೋಪದಿಂದ ಅಲ್ಲಿಂದ ಹೋದ ದೀಕ್ಷಿತ್ ಪೂಜಾರಿ ನಾಪತ್ತೆಯಾದ ಬಗ್ಗೆ ಜತೆಗಿದ್ದವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ರಾತ್ರಿ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಬೆಳಿಗ್ಗೆ ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾರ್ಯಾಚರಣೆ ಮುಂದುವರೆಸಿದ್ದರು.

ಆದರೆ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿದ್ದಾನೆ. ದೀಕ್ಷಿತ್ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆಮಂದಿ ಮಾಹಿತಿ ನೀಡಿದ್ದಾರೆ.

Related Articles

Back to top button