ಸಾಂಸ್ಕೃತಿಕ

ಕೋಟೇಶ್ವರ  ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಅರಳಿದ ರಥ ನಿರ್ಮಾಣದ ಮಹಾನ್ ಶಿಲ್ಪಿಗಳು

Views: 218

ಕನ್ನಡ ಕರಾವಳಿ ಸುದ್ದಿ: ಉನ್ನತ ಮಟ್ಟದ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ವಿದೇಶಿಗರು ಕೂಡ ಇಲ್ಲಿಯ ಕಲೆಗೆ ವಿಸ್ಮಯ ಪಡುತ್ತಾರೆ, ಮನದುಂಬಿ ಹೊಗಳುತ್ತಾರೆ, ಆ ನಿಟ್ಟಿನಲ್ಲಿ ಕೋಟೇಶ್ವರದ ಶಿಲ್ಪಗುರು, ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಪ್ರತಿಭಾವಂತ ಕಲಾವಿದ  ಶ್ರೀ ರಾಜಗೋಪಾಲ ಆಚಾರ್ಯ, ಇನ್ನೊರ್ವ ಪುತ್ರ ಗಣಪತಿ ಆಚಾರ್ಯ ಅವರು ಶಿಲ್ಪ ಕಲೆಯ ಮೂಲಕ ನಮ್ಮ ಹಿರಿಮೆ ಗರಿಮೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.ಶಾಶ್ವತವಾಗಿ ಮುಂದಿನ ಪೀಳಿಗೆವರೆಗೂ ಉಳಿಯುವಂತೆ ಮಾಡಿದ ಕೆಲಸ ಶ್ಲಾಘನೀಯ.

ನಮ್ಮ ದೇಶದಲ್ಲಿ ಒಂದು ಕಾಲಕ್ಕೆ ಪಾರಮ್ಯವನ್ನು ಸಾಧಿಸಿದ್ದ, ವೈಭವಯುತವಾದ ಶಿಲ್ಪ ಶಾಸ್ತ್ರವು ಕಾಲಾಂತರದಲ್ಲಿ ಸೊರಗುತ್ತಾ ಬಂತು ಪರಕಿಯರ ಆಡಳಿತ ಬಂದಾಗ ವಸಾಹತುಶಾಹಿಗಳ ಕೈ ಮೇಲಾಗಿ ವೇದ, ವಿದ್ಯೆ ,ಶಿಲ್ಪಕಲೆ, ಜ್ಯೋತಿಷ್ಯ ,ಆಯುರ್ವೇದ ಇತ್ಯಾದಿಗಳು ಮೂಲೆ ಗುಂಪಾದವು ಈ ಎಲ್ಲಾ ವಿದ್ಯೆಗೆ ತಿಲಾಂಜಲಿ ಇಡುವ ಸಂದರ್ಭದಲ್ಲಿ ಬದುಕುವ ವಿದ್ಯೆಯತ್ತ ತಮ್ಮ ಕಾಯಕಕ್ಕೆ ಬಂದವರು

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಶಿಲ್ಪಗುರು, ಜಕಣಾಚಾರ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಆಚಾರ್ಯ ಇವರು ಪಾರಂಪರಿಕವಾಗಿ ಮರದ ಕೆಲಸ ಕುಲ ಕಸುಬನ್ನು ಕಾಯಕವನ್ನಾಗಿಸಿಕೊಂಡು ತಮ್ಮ 18ನೇ ವಯಸ್ಸಿನಲ್ಲಿ ಸಹೋದರ ಶಂಕರ ಆಚಾರ್ಯ ಇವರೊಂದಿಗೆ ಸ್ವತಂತ್ರವಾದ ಕಾರ್ಯಗಾರ ಆರಂಭಿಸಿ ದೇವರ ಮಂಟಪ, ಪ್ರಭಾವಳಿ, ದೇವರ ಮೂರ್ತಿ, ಚಿಕ್ಕಗಂಧದ ಶಿಲ್ಪ ಕಲಾಕೃತಿ, ನಾಗರಕಲ್ಲು, ಶಿಲೆಗಳಲ್ಲಿ ಕಲಾಕೃತಿಯ ನೈಪುಣ್ಯತೆಯಿಂದ ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಳ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಹೆಬ್ಬಾಗಿಲಿನ ಕೆತ್ತನೆಯು ಸೊಬಗನ್ನು ಉದ್ಘಾಟನೆಗೆ ಆಗಮಿಸಿದ ಅಂದಿನ ಸರಕಾರದ ಮುಖ್ಯಮಂತ್ರಿ ಬಿ.ಡಿ. ಜಗತ್ತಿಯವರು ಇವರ ಕಲಾ ನೈಪುಣ್ಯತೆಯನ್ನು ಪ್ರಶಂಸಿದರು.

ಗುರುಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಗೋಪಾಡಿಯ ಶ್ರೀ ವೆಂಕಟರಮಣ ಆಚಾರ್ಯ ಇವರಿಂದ ರಥಶಿಲ್ಪದ ಬಗ್ಗೆ ಮಾಹಿತಿ, ಶಾಸ್ತ್ರದ ಆಧಾರ ಇತ್ಯಾದಿಗಳನ್ನು ತಿಳಿದುಕೊಂಡು ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡರು.

1969ರಲ್ಲಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ನೆಲದಿಂದ 27 ಅಡಿ ಎತ್ತರದ ಪುಷ್ಪ ರಥ ಇವರು ನಿರ್ಮಾಣ ಮಾಡಿದ ಪ್ರಥಮ ರಥವಾಗಿದೆ.

ರಥ ತಿರುಗಿಸುವ ಸ್ಟೇರಿಂಗ್ ಅವಿಷ್ಕಾರ

ರಥ ತಿರುಗಿಸಲು ತ್ರಾಸವಾಗಿರುವ ಸಂದರ್ಭದಲ್ಲಿ ಇವರು ರಥಗಳಿಗೆ ಸ್ಟೇರಿಂಗ್ ಅಳವಡಿಸಿ ರಥವನ್ನು ಬೇಕಾದಲ್ಲಿ ತಿರುಗಿಸುವ ಹೊಸ ಆವಿಷ್ಕಾರವನ್ನು ಕಂಡುಹಿಡಿದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮರಥ ಅಳವಡಿಸಲಾಯಿತು. ನಂತರ ಉಡುಪಿ,ಧರ್ಮಸ್ಥಳ ಮೊದಲಾದ ಹಳೆಯ ಬ್ರಹ್ಮರಥಗಳಿಗೆ ಮತ್ತು 80ಕ್ಕೂ ಹೆಚ್ಚು ರಥಗಳಿಗೆ ಸ್ಟೇರಿಂಗ್ ಅಳವಡಿಸಿದ್ದಾರೆ. ಅಲ್ಲದೆ 400 ವರ್ಷಗಳ ಹಳೆಯ ರಥದ ತದ್ರೂಪ ಮಾದರಿಯಲ್ಲಿ ರಚಿಸಿಕೊಟ್ಟ ಕೀರ್ತಿ ಇವರದ್ದು.

ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ

1980ರಲ್ಲಿ ಕೋಟೇಶ್ವರದ ಮುಖ್ಯ ರಸ್ತೆ ಸರಕಾರಿ ಪದವಿಪೂರ್ವ ಕಾಲೇಜು ಪಕ್ಕದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯನ್ನು ಆರಂಭಿಸಿ, ರಥ ಹಾಗೂ ಶಿಲ್ಪಕಲೆಗೆ ಸಂಬಂಧಿಸಿದ ಕೆಲಸಗಳನ್ನು ಇಲ್ಲಿಯೇ ತಯಾರಿಸಲಾಗುತ್ತಿದೆ.

ಆಧುನಿಕತೆಗೆ ತಕ್ಕಂತೆ ಯಂತ್ರೋಪಕರಣಗಳನ್ನು ಹೊಂದಿದ್ದು ,ಶಿಲ್ಪಿಗಳಿಗೆ ಇಲ್ಲಿಯೇ ಆಶ್ರಯ ನೀಡಿದ್ದಲ್ಲದೆ ಶಿಲ್ಪಕಲೆಯನ್ನು ಕಲಿಯುವ ಆಸಕ್ತಿ ಹೊಂದಿರುವ ಯುವಕರಿಗೆ ಊಟ ವಸತಿಯೊಂದಿಗೆ ತರಬೇತಿ ನೀಡುತ್ತಿದ್ದಾರೆ. ಶಿಲ್ಪಕಲಾ ಶಾಲೆಯಲ್ಲಿ ಏಕ ಕಾಲದಲ್ಲಿ ಮೂರು ನಾಲ್ಕು ರಥಗಳನ್ನು ನಿರ್ಮಿಸುವ ತಾಣ ಇದಾಗಿದೆ.

ವಿಶ್ವಕರ್ಮರ ಪಂಚ ಕಸುಬುಗಳಲ್ಲಿ ನಿರತರಾದವರನ್ನು ಒಂದು ಕಡೆ ಸೇರಿಸಿ ಅಲ್ಲಿಯೇ ಕುಲಕಸಬು ಮಾಡುವ ಕರಕುಶಲ ,ಸಿದ್ಧ ವಸ್ತುಗಳನ್ನು ಒಂದೇ ಕಡೆ ಸಿಗುವಂತೆ ಪ್ರಸಿದ್ಧ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಮೀಪ 10 ಎಕರೆ ಜಾಗ ಖರೀದಿಸಿ ಹಲವಾರು ವಿಶ್ವಕರ್ಮ ಕುಟುಂಬಗಳಿಗೆ ಸ್ಥಳ ವಿಕ್ರಯಿಸಿ ಕೊಟ್ಟಿದ್ದಲ್ಲದೆ, ಅಲ್ಲಿಯೇ ಗುರುಕುಲ ಮಾದರಿಯ ವಿಶ್ವಕರ್ಮ ಗುರುಕುಲ( ರಿ) ಎನ್ನುವ ಕರಕುಶಲ ವಿಸ್ತಾರವಾದ ಕಾರ್ಯಗಾರವನ್ನು ನಿರ್ಮಿಸಿ ಆಧುನಿಕ ತಂತ್ರಜ್ಞಾನದೊಂದಿಗೆ ಏಕ ಕಾಲದಲ್ಲಿ 8 ಕ್ಕೂ ಹೆಚ್ಚು ರಥ ನಿರ್ಮಾಣ ಮಾಡುವ ತಾಣ ಇದಾಗಿದೆ.

ಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರು ರಥ ಶಿಲ್ಪದ ಬಗ್ಗೆ ಅಧ್ಯಯನಕ್ಕಾಗಿ ತಿರುವಾಂಕೂರು, ಶುಚೀಂದ್ರಂ ,ಹಳೇಬೀಡು, ಬೇಲೂರು,ಹಂಪಿ ಅಲ್ಲಿಗೆ ಸಂದರ್ಶಿಸಿಸಿ ಅಲ್ಲಿನ ರಥಶಿಲ್ಪದ ಬಗ್ಗೆ ತಿಳಿದುಕೊಂಡು ಆಗಮ ಶಾಸ್ತ್ರದ ಪಂಡಿತರು, ಶಿಲ್ಪಗಳಿಂದ ಶಾಸ್ತ್ರದ ಅನುಭವ ಪಡೆದುಕೊಂಡಿದ್ದಾರೆ.

ಎಲ್ಲಾ ರಥಗಳಲ್ಲಿ ಆ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನು ಹಾಗೂ ದೇವರ, ಪರಿವಾರ ದೇವತೆಗಳನ್ನು, ರಾಮಾಯಣ, ಮಹಾಭಾರತದ ಕಥೆಗಳನ್ನು ನೆನಪಿಸುವ, ಕರಾವಳಿಯ ಯಕ್ಷಗಾನದ ಕಲೆಯ ಚಿತ್ರಗಳನ್ನು ರಥಗಳಲ್ಲಿ ಕೆತ್ತನೆ ಮೂಲಕ ಮೂಡಿಸಿದ್ದಾರೆ.

ಈವರೆಗೆ ನಿರ್ಮಿಸಿದ ರಥಗಳು

ಈವರೆಗೆ ಒಟ್ಟು 171 ರಥಗಳನ್ನು ನಿರ್ಮಿಸಿದ್ದಾರೆ. 56 ಬ್ರಹ್ಮರಥ, 92 ಪುಷ್ಪರಥ, 13 ಬೆಳ್ಳಿಯ ರಥ, 2 ಚಿನ್ನದ ರಥಕ್ಕೆ ಮರದ ರಥ 2 ಇಂದ್ರ ರಥ 1 ಚಂದ್ರ ರಥ, 4 ಬಂಡಿ (ಭಾಂಡಿ ರಥ), ಚಂದ್ರ ಮಂಡಲ1

ಇವರಿಗೆ ಸಂದ ಪ್ರಶಸ್ತಿ- ಪುರಸ್ಕಾರಗಳು

ರಾಜ್ಯ ಪ್ರಶಸ್ತಿ (1983 )

ರಾಷ್ಟ್ರ ಪ್ರಶಸ್ತಿ( 1991)

ಕರ್ನಾಟಕ ಶಿಲ್ಪಕಲಾ ಅಕಾಡೆಮಿಪ್ರಶಸ್ತಿ( 1998)

ರಾಷ್ಟ್ರೀಯ ಶಿಲ್ಪಗುರು ಪ್ರಶಸ್ತಿ (2006)

ಜಕಣಾಚಾರಿ ಪ್ರಶಸ್ತಿ (2019)

ಇವರಿಗೆ ಒಲಿದು ಬಂದ ಇತರೆ ಪ್ರಶಸ್ತಿಗಳು

ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ

ಕಲ್ಕೂರು ಪ್ರಶಸ್ತಿ (ಕಲ್ಕೂರು ಪ್ರತಿಷ್ಠಾನ ಮಂಗಳೂರು)

ರಾಮ ವಿಠಲ ಪ್ರಶಸ್ತಿ (ಪೇಜಾವರ ಮಠಾಧೀಶರಿಂದ)

ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ

ವಿಶ್ವಕರ್ಮ ಪ್ರಶಸ್ತಿ (ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು)

ಅನುಗ್ರಹ ಪತ್ರ(ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಕಟಪಾಡಿ)

ಅಭಿನಂದನೆಗಳು( ಆಳ್ವಾಸ್ ನುಡಿಸಿರಿ)

ನಮ್ಮೂರ ಪ್ರಶಸ್ತಿ

ಸನ್ಮಾನ ಪತ್ರ (ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನ ಮೂಡುಬಿದಿರೆ)

ಆಳ್ವಾಸ್ ನುಡಿಸಿರಿ ಪ್ರಶಸ್ತಿ

ಇವರು 38ಕ್ಕೂ ಹೆಚ್ಚು ದೇವಳ ಹಾಗೂ ಸಂಘ-ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಸಂಶ ಪತ್ರಗಳನ್ನು ಪಡೆದಿರುತ್ತಾರೆ.

ಸಾಮಾಜಿಕ,ರಾಜಕೀಯ ,ಧಾರ್ಮಿಕ ಚಟುವಟಿಕೆಗಳು

ಇವರು ಗೋಪಾಡಿ ಪಂಚಾಯತ್ ಸದಸ್ಯರು, ಅಧ್ಯಕ್ಷರಾಗಿ ಕುಂಭಾಶಿ ಮಂಡಲದ ಸದಸ್ಯರು, ಮತ್ತು ಮಂಡಲ ಪ್ರಧಾನರಾಗಿ

ಬಾರಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಮೊಕ್ತೇಸರರಾಗಿ, ಕೋಟೇಶ್ವರ ವಿಶ್ವಕರ್ಮ ಸಂಘದ ಸ್ಥಾಪಕರಾಗಿ, ಉತ್ತಮ ಕೆಲಸ ನಿರ್ವಹಿಸಿದ್ದರು.

ಕೋಟೇಶ್ವರದಲ್ಲಿ ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಸೊಸೈಟಿ ಸ್ಥಾಪನೆಯ ಕಾರಣಿಕರ್ತರು,

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರತಿಭಾವಂತ ಶಿಲ್ಪ ಕಲಾವಿದ ಶ್ರೀ ರಾಜಗೋಪಾಲ ಆಚಾರ್ಯ

 

ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯನ್ನು ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಪ್ರತಿಭಾವಂತ ಕಲಾವಿದ ಶ್ರೀ ರಾಜಗೋಪಾಲ ಆಚಾರ್ಯ ಅವರು ಕಳೆದ 17 ವರ್ಷಗಳಿಂದ  ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ..

ಇಂದಿನ ಆಧುನಿಕತೆಗೆ ತಕ್ಕಂತೆ ಸಾಂಪ್ರದಾಯಿಕ ಶಾಸ್ತ್ರಗಳಿಗೆ ಯಾವುದೇ ಚ್ಯುತಿ ಬಾರದಂತೆ ಆಯಾದಿ ಅಳೆತೆಗಳನ್ನು ಶಾಸ್ತ್ರೋಕ್ತವಾಗಿ ಉಪಯೋಗಿಸಿಕೊಂಡು ರಥ ನಿರ್ಮಾಣದಲ್ಲಿ ತಮ್ಮದೇ ಆದ ಚಾಕಚಕ್ಯತೆಯೊಂದಿಗೆ ಈ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ರಥ ನಿರ್ಮಾಣದ ಶಿಲ್ಪಕಲೆಯನ್ನು ಮುನ್ನೆಡೆಸುತ್ತಿದ್ದಾರೆ.

ಮರದ ರಥದ ಕೆಲಸದೊಂದಿಗೆ ಬೆಳ್ಳಿಯ ಕೆಲಸವನ್ನು ನಿರ್ವಹಿಸುವಲ್ಲಿಯೂ ಸಫಲತೆಯನ್ನು ಕಂಡಿದ್ದು, ಇವರ ಸಾರಥ್ಯದಲ್ಲಿ ಹಲವಾರು ರಥಗಳಿಗೆ ಶಿಲ್ಪ ರಚನೆ, ಇವರ ನಿರ್ದೇಶನದಲ್ಲಿಯೇ ಆಗುತ್ತಿದೆ. ಜೊತೆಗೆ ಚಿನ್ನದ ಕವಚ, ಬೆಳ್ಳಿಯ ಬಾಗಿಲು, ಪ್ರಭಾವಳಿ, ದೇವರ ಕವಚ, ಬೆಳ್ಳಿಯ ಪಲ್ಲಕಿ, ಬೆಳ್ಳಿಯ ಲಾಲಕಿ,ಬೆಳ್ಳಿಯ ಮಂಟಪ, ಪೀಠಗಳು,ವೈವಿಧ್ಯಮಯ ಚಿತ್ರಕಲೆಯನ್ನು ಯಥಾವತ್ತಾಗಿ ರಚಿಸುವಲ್ಲಿ ಪ್ರಾವೀಣ್ಯತೆಯನ್ನು ಇವರು ಪಡೆದಿರುತ್ತಾರೆ.

ಇತ್ತೀಚಿಗೆ ನಿರ್ಮಾಣಗೊಂಡ ಶ್ರೀ ಯೋಗ ಮತ್ತು ಭೋಗಾನಂದೀಶ್ವರ ದೇವಸ್ಥಾನ ಚಿಕ್ಕಬಳ್ಳಾಪುರ- ಬೆಂಗಳೂರು

ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥ ನಿರ್ಮಾಣದ ಶಿಲ್ಪಕಲೆಯ ಮೂಲಕ ರಥದಲ್ಲಿ ನವರಸ ಕಲೆ, ವಾಸ್ತು, ಹಲವು ಸಂಪ್ರದಾಯಗಳು ಸೇರಿದಂತೆ ಎಲ್ಲಾ ಪ್ರಕಾರಗಳು ಅಡಕವಾಗಿ, ಸಾಂಪ್ರದಾಯಿಕ ನಮ್ಮ ಸಂಸ್ಕೃತಿಯನ್ನು ರಥ ನಿರ್ಮಾಣದ ಶಿಲ್ಪಕಲೆಯ ಮೂಲಕ ಮಹಾನ್ ಶಿಲ್ಪಿಗಳು ಕರಕುಶಲ ವೈಭವ ಮೆರಿದಿದ್ದಾರೆ.

Related Articles

Back to top button