ಇತರೆ

ಕೊಡಗು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ  ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Views: 55

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಾದನಾಯಕನ ಹಳ್ಳಿಯ ತಿರುಮಲಪುರದಲ್ಲಿ ತಡ ರಾತ್ರಿ ನಡೆದಿದೆ.

ಕೊಡಗು ಮೂಲದ ಹೆಸರುಘಟ್ಟದ ಆರ್.ಆರ್ ಕಾಲೇಜುನಲ್ಲಿ ಪ್ರಥಮ ವರ್ಷದ ಬಿಇ ಇನ್ ಫರ್ ಮೇಶನ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿಶು ಉತ್ತಪ್ಪ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರವಿ ತಿಮ್ಮಯ್ಯ ಅವರ ಒಬ್ಬನೇ ಪುತ್ರನಾಗಿದ್ದಾನೆ.ರವಿ ತಿಮ್ಮಯ್ಯ ಅವರು ಕೊಡಗಿನಲ್ಲಿ ಪರವಾನಗಿ ಪಡೆದ ಡಬ್ಬಲ್ ಬ್ಯಾರಲ್ ಗನ್ ಹೊಂದಿದ್ದು ತಾವು ಕೆಲಸ ಮಾಡುತ್ತಿದ್ದ ಕಡೆ ಅಗತ್ಯವಿಲ್ಲದಿದ್ದರಿಂದ ಗನ್ ಮನೆಯಲ್ಲಿಯೇ ಇಟ್ಟು ಹೋಗುತ್ತಿದ್ದರು.ಮನೆಯಲ್ಲಿ ನಿನ್ನೆ ಮಧ್ಯಾಹ್ನ ವಿಶು ಉತ್ತಪ್ಪ ಮನೆಯಲ್ಲಿದ್ದು ಆತನನ್ನು ವಿಚಾರಿಸಿ ತಂದೆ ತಾಯಿ ಮನೆಯ ಸಾಮಾನುಗಳನ್ನು ತರಲು ಕಾರಿನಲ್ಲಿ ಹೋರಹೋಗಿದ್ದರು.ಕೆಲವೇ ಸಮಯದ ಬಳಿಕ ವಿಶು ಉತ್ತಪ್ಪ ತಾಯಿಗೆ ಮೊಬೈಲ್ ಕರೆ ಮಾಡಿ ನನ್ನನ್ನು ಕ್ಷಮಿಸಿ ಎಂದು ಕೇಳಿದ್ದಾನೆ.

ಸಮಾಧಾನಪಡಿಸಿದ ತಾಯಿಗೆ ಮತ್ತೆ ಸಂಜೆ ವೇಳೆಗೆ ಮತ್ತೊಮ್ಮೆ ಕರೆ ಮಾಡಿ ನನ್ನನ್ನು ಕ್ಷಮಿಸಿ ನಾನು ಗುಂಡು ಹಾರಿಸಿಕೊಂಡಿದ್ದೇನೆ ಎಂದು ಹೇಳಿದ್ದಾನೆ.

ತಕ್ಷಣವೇ ಕಾರಿನಲ್ಲಿ ತಂದೆ-ತಾಯಿ ವಾಪಾಸು ಮನೆಗೆ ಬಂದಾಗ ಬಾಗಿಲನ್ನು ಗಾಯಗೊಂಡ ಸ್ಥಿತಿಯಲ್ಲೇ ವಿಶು ಉತ್ತಪ್ಪ ತೆಗೆದಿದ್ದು ಕೊಡಲೇ ಆತನನ್ನು ಸ್ಥಳೀಯ ಪ್ರಕ್ರಿಯಾ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬದುಕಿದ್ದ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ವಿಶು ಉತ್ತಪ್ಪ ಎದೆಯ ಎಡಭಾಗದ ಎದೆಗೆ ಗುಂಡು ಹಾರಿಸಿಕೊಂಡಿದ್ದು ಅದು ಹೃದಯ ಹಾದು ಹೋಗಿದ್ದರಿಂದ ಸಾವು ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೋಕೋ, ಎಫ್‌ಎಸ್‌ಎಲ್ ತಂಡಗಳಿಂದ ತನಿಖೆ ನಡೆಸುತ್ತಿದ್ದು, ವಿಶುವಿನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು,ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ಪುರುಷೋತ್ತಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Back to top button