ಇತರೆ

ಕೊಡಗಿನ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ: 6 ಗಂಟೆಯೊಳಗೆ ಆರೋಪಿ ಸೆರೆ 

Views: 113

ಕನ್ನಡ ಕರಾವಳಿ ಸುದ್ದಿ: ಕೊಡಗಿನ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹತ್ಯಾಕಾಂಡ ನಡೆದ 6 ಗಂಟೆಯೊಳಗೆ ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ಮಹಿಳೆ, ತನ್ನ ಎರಡನೇ ಗಂಡನ ಜೊತೆ ಮತ್ತೆ ಸಂಬಂಧ ಹೊಂದಿದ್ದಳು ಎಂಬ ಅನುಮಾನದಿಂದಲೇ ಆಕೆಯ ಮೂರನೇ ಗಂಡ ಆಕೆಯನ್ನೂ ಇತರ ಸಂಬಂಧಿಕರನ್ನೂ ಕೊಂದು ಕೇರಳಕ್ಕೆ ಪರಾರಿಯಾಗಿರುವುದು ಗೊತ್ತಾಗಿದೆ. ಶುಕ್ರವಾರ (ಮಾ.28) ಮಧ್ಯಾಹ್ನ ಸುಮಾರು 01.30ರ ಸುಮಾರಿಗೆ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಭೀಕರ ಕೊಲೆಯಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಪರಾಧ ಪತ್ತೆ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು. ಬಳಿಕ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ವಿರಾಜಪೇಟೆ ಉಪವಿಭಾಗ ಡಿಎಸ್‌ಪಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು.

ಕೊಲೆಯಾದ ಬುಡಕಟ್ಟು ಜನಾಂಗದ ಕರಿಯ, ಗೌರಿ, ನಾಗಿ(30), ಕಾವೇರಿ(7) ಹಾಗೂ ಆರೋಪಿ ಗಿರೀಶ್ (38) ಒಂಟಿ ಮನೆಯಲ್ಲಿ ವಾಸವಿದ್ದರು. ಆರೋಪಿ ಗಿರೀಶ್ ಮೃತ ಮಹಿಳೆ ನಾಗಿಯ ಮೂರನೇ ಗಂಡನಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸವಿದ್ದರು. ನಾಗಿಯ ಎರಡನೇ ಗಂಡ ಸುಬ್ರಮಣಿಯೊಂದಿಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶ್ 27ರ (ಗುರುವಾರ) ರಾತ್ರಿ ಸಮಯದಲ್ಲಿ ಕರಿಯ (ನಾಗಿಯ ಅಜ್ಜ), ಗೌರಿ (ನಾಗಿಯ ಅಜ್ಜಿ), ನಾಗಿ, ಮತ್ತು ಕಾವೇರಿ (ಗಿರೀಶ್ನ ಮಲ ಮಗಳು)ನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.

ಪ್ರಕರಣದ ಆರೋಪಿಯನ್ನು ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲಿ ಕೇರಳ ರಾಜ್ಯದ ತಲಪುಳ ಎಂಬ ಸ್ಥಳದಲ್ಲಿ ವಿಶೇಷ ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿದೆ.

Related Articles

Back to top button