ಆರ್ಥಿಕ

ಕೆವೈಸಿ ನವೀಕರಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ RBI

Views: 75

ಕೆವೈಸಿ (KYC) ನವೀಕರಣದ ಹೆಸರಿನಲ್ಲಿ ನಡೆಯುವ ವಂಚನೆಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. 

ವಂಚಕರು ಸಾಮಾನ್ಯವಾಗಿ ದೂರವಾಣಿ ಕರೆಗಳು, SMS ಗಳು, ಇಮೇಲ್ ಗಳ ಮುಖಾಂತರ ಗ್ರಾಹಕರನ್ನು ಸಂಪರ್ಕಿಸಿ, ಅವರ ವೈಯಕ್ತಿಕ ಮಾಹಿತಿ, ಖಾತೆಗಳ ವಿವರ, ಲಾಗಿನ್ ವಿವರ, ಕಾರ್ಡ್ ಗಳ ಮಾಹಿತಿ, ಪಿನ್ ಸಂಖ್ಯೆ, ಓಟಿಪಿ ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಮಾಹಿತಿಗಳನ್ನು ತಿಳಿಸದೇ ಹೋದರೆ ಗ್ರಾಹಕರ ಖಾತೆಗಳನ್ನು ತಕ್ಷಣ ಬಂದ್ ಮಾಡುವುದಾಗಿ ಹೆದರಿಸುತ್ತಾರೆ. ಅವರಿಗೆ ಹೆದರಿ, ಬೇಕಾದ ಮಾಹಿತಿ ಒದಗಿಸಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ಖಾತೆಯಲ್ಲಿ ಇರುವ ಹಣ ಮಾಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗ್ರಾಹಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವನ್ನು ರಿಸರ್ವ್ ಬ್ಯಾಂಕ್ ಒತ್ತಿ ಹೇಳಿದೆ.

ಹೀಗೆ ಮಾಡಿರಿ

ಕೆವೈಸಿ ನವೀಕರಣದ ಬಗ್ಗೆ ಫೋನ್ ಕರೆಗಳು ಬಂದಾಗ ಕರೆಯನ್ನು ಕಟ್ ಮಾಡಿ, ನೇರವಾಗಿ ನಿಮ್ಮ ಬ್ಯಾಂಕನ್ನು ಸಂಪರ್ಕಿಸಿ, ಅವರು ಕರೆ ಮಾಡಿರುವುದು ನಿಜವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಬ್ಯಾಂಕ್ ನೀಡಿದ ಅಥವಾ ಬ್ಯಾಂಕ್ ಮೂಲಗಳಿಂದಲೇ ಪಡೆದ ದೂರವಾಣಿ ನಂಬರುಗಳನ್ನೇ ಉಪಯೋಗಿಸಿ ಬ್ಯಾಂಕ್ ಸಂಪರ್ಕ ಮಾಡಿರಿ. (ಅನಪೇಕ್ಷಿತ ಕರೆ ಮಾಡಿದವರು ನೀಡಿದ ನಂಬರ್ ಉಪಯೋಗಿಸಲೇಬೇಡಿ).

ವಂಚನೆಗಳೇನಾದರೂ ಸಂಭವಿಸಿದಲ್ಲಿ ಅದನ್ನು ತಕ್ಷಣ ನಿಮ್ಮ ಬ್ಯಾಂಕಿಗೆ ತಿಳಿಸಿರಿ.

ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ, ಕೆವೈಸಿ ನವೀಕರಣದ ಅಗತ್ಯ ಕಂಡುಬಂದರೆ, ನೀವೇನು ಮಾಡಬೇಕು ಎಂಬುದನ್ನು ಅವರಿಂದಲೇ ತಿಳಿದುಕೊಡು, ಅದರಂತೆ ಮಾಡಿರಿ.

ಹೀಗೆ ಮಾಡಲೇ ಬೇಡಿರಿ

ನಿಮ್ಮ ವೈಯಕ್ತಿಕ ಮಾಹಿತಿ, ಖಾತೆಗಳ ವಿವರ, ಲಾಗಿನ್ ವಿವರ, ಕಾರ್ಡ್ ಗಳ ಮಾಹಿತಿ, ಪಿನ್ ಸಂಖ್ಯೆ, ಓಟಿಪಿ ಮೊದಲಾದ ಮಾಹಿತಿಗಳನ್ನು ಬೇರೆಯವರೊಂದಿಗೆ ಎಂದಿಗೂ ಹಂಚಿಕೊಳ್ಳದಿರಿ.

ಕೆವೈಸಿ ದಾಖಲೆಗಳನ್ನು ಅಪರಿಚಿತ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ.

ನಿಮ್ಮ ಸೂಕ್ಷ್ಮ ಮಾಹಿತಿಗಳನ್ನು ಅನಧಿಕೃತ ಜಾಲತಾಣಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.

ಮೊಬೈಲ್ ಮತ್ತು ಇಮೇಲ್ ಗಳಲ್ಲಿ ಬರುವ ಸಂದೇಹ ಇರುವ ಮತ್ತು ಸೂಕ್ತ ಮಾಹಿತಿ ಇಲ್ಲದಿರುವ ಲಿಂಕ್ ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ.

ಮಾಹಿತಿ ವರದಿ: ನಾರಾಯಣ ಶೆಟ್ಟಿಗಾರ್, ಬೆಂಗಳೂರು 

ನಿವೃತ್ತ ಬ್ಯಾಂಕ್ ಅಧಿಕಾರಿಗಳು 

ಮೊ. 9845660131

Related Articles

Back to top button