ಕುಂದಾಪುರ: ರವಿ ಬಸ್ರೂರು ನಿರ್ದೇಶನದ ಯಕ್ಷಗಾನ ವೈಭವದ ‘ವೀರಚಂದ್ರಹಾಸ’ ಬಿಡುಗಡೆಗೆ ಸಿದ್ಧ

Views: 153
ಕನ್ನಡ ಕರಾವಳಿ ಸುದ್ದಿ: ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಯಕ್ಷಗಾನ ವೈಭವವನ್ನು ಈ ಚಿತ್ರದ ಮೂಲಕ ತೆರೆಗೆ ತರಲಾಗುತ್ತದೆ.ಸಂಗೀತ ನಿರ್ದೇಶಕ ಕುಂದಾಪುರದ ರವಿ ಬಸ್ರೂರು ಕನಸಿನ ‘ವೀರಚಂದ್ರಹಾಸ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸಾಮಾನ್ಯವಾಗಿ ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಅಲ್ಲಿ ದೃಶ್ಯಗಳನ್ನು ಕಟ್ಟಲು ಒಂದಷ್ಟು ಮಿತಿಗಳು ಇರುತ್ತವೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾದಲ್ಲಿ ಕಥೆಯನ್ನು ಹೇಳಬಹುದು. ಅದೇ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಈ ಸಿನಿಮಾ ಮೂಲಕ ಯಕ್ಷಗಾನವನ್ನು ತೆರೆಮೇಲೆ ತರಲಾಗುತ್ತಿದೆ.
‘ಉಗ್ರಂ’, ‘KGF’ ಸರಣಿ, ‘ಸಲಾರ್’ ರೀತಿಯ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಂಗೀತ ನೀಡಿ ಗೆದ್ದವರು ರವಿ ಬಸ್ರೂರು. ಬಾಲಿವುಡ್ ಟಾಲಿವುಡ್, ಕಾಲಿವುಡ್‌ನಲ್ಲೂ ಭಾರೀ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಆದರೂ ಸಿನಿಮಾ ನಿರ್ದೇಶನಕ್ಕೆ ಅವರ ಮನಸ್ಸು ಸದಾ ಹಾತೊರೆಯುತ್ತಿರುತ್ತದೆ. ಈಗಾಗಲೇ ‘ಕಟಕ’ ಹಾಗೂ ‘ಗಿರ್ಮಿಟ್’ ಎಂಬ 2 ಚಿತ್ರಗಳನ್ನು ಅವರು ನಿರ್ದೇಶನ ಸಹ ಮಾಡಿದ್ದಾರೆ. ಅವರ ಮೂರನೇ ಪ್ರಯತ್ನ ‘ವೀರಚಂದ್ರಹಾಸ’ ಶಿವರಾಜ್‌ಕುಮಾರ್ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ ಕೂಡ ಯಕ್ಷಗಾನ ವೇಷದಲ್ಲೇ ಕಾಣಿಸಿಕೊಂಡಿರುವುದು ವಿಶೇಷ
ಎನ್. ಎಸ್ ರಾಜ್‌ಕುಮಾರ್ ‘ವೀರಚಂದ್ರಹಾಸ’ ಚಿತ್ರಕ್ಕೆ ಹಣ ಹೂಡಿದ್ದಾರೆ. ಏಪ್ರಿಲ್ 18ಕ್ಕೆ ಸಿನಿಮಾ ತೆರೆಗೆ ಬರಲಿದೆ. ಶಿಥಿಲ್ ಶೆಟ್ಟಿ , ನಾಗಶ್ರೀ ಜಿ ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್ , ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯಕ್ಷಗಾನದಲ್ಲಿ ‘ವೀರಚಂದ್ರಹಾಸ’ ಕಥೆ ಬಹಳ ಪ್ರಸಿದ್ಧಿ. ಅದೇ ಕಥೆಗೆ ಇದೀಗ ತೆರೆಮೇಲೆ ತರಲಾಗುತ್ತಿದೆ.
ಒಂದು ಪೌರಾಣಿಕ ಪ್ರಸಂಗವನ್ನು, ಸಾಂಪ್ರದಾಯಿಕ ಕಲೆಯ ಮೂಲಕ ರವಿಬಸ್ರೂರು ದೃಶ್ಯರೂಪಕ್ಕೆ ಇಳಿಸಿದ್ದಾರೆ. ಸಿಂಗಾನಲ್ಲೂರು ಸಂಸ್ಥಾನದ ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿ ಆಗಿ ಶಿವಣ್ಣ ನಟಿಸಿದ್ದಾರೆ. ‘ಕೆಜಿಎಫ್’ ಗರುಡ ಖ್ಯಾತಿಯ ರಾಮ್ ಕೂಡ ಮತ್ತೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರವಿಬಸ್ರೂರು ‘ವೀರಚಂದ್ರಹಾಸ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಸಿದ್ದಾರೆ. ನಿಮ್ಮ ಚಿತ್ರಕ್ಕೆ ಸರ್ಕಾರದಿಂದ ಅಗತ್ಯ ಇರುವ ನೀಡುತ್ತೇವೆ ಎಂದು ಸಿಎಂ ಹೇಳಿರುವುದಾಗಿ ರವಿ ಬಸ್ರೂರು ತಿಳಿಸಿದ್ದಾರೆ. ಕಿರಣ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸ್ವತಃ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.400ಕ್ಕೂ ಅಧಿಕ ಯಕ್ಷಗಾನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.