ಕುಂದಾಪುರದಲ್ಲಿ ಮುಂದುವರಿದ ಮಳೆ ಆರ್ಭಟ :ಜನ ಜೀವನ ಅಸ್ತವ್ಯಸ್ತ

Views: 0

ಕುಂದಾಪುರದಲ್ಲಿ ಹರಿಯುತ್ತಿರುವ ಪಂಚ ನದಿಗಳಾದ ಸೌರ್ಪಣಿಕ,ಖೇಟ ,ಚಕ್ರ, ಕುಬ್ಜ, ವಾರಾಹಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಮತ್ತು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅಪಾಯ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮಳೆ ಇನ್ನೂ ಮುಂದುವರಿದರೆ ಅಪಾಯದಲ್ಲಿರುವ ಮನೆಗಳಲ್ಲಿನ ಜನರು ಮತ್ತು ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಭೀತಿಯಲ್ಲಿದ್ದಾರೆ.
ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೆರೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದಿಂದ ಕುಂದಾಪುರದ ಸಮೀಪ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಅವಘಡದಲ್ಲಿ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ದಿನಕರ ಶೆಟ್ಟಿ( 53) ಎಂಬುವರು ರಸ್ತೆ ಸರಿಯಾಗಿ ಗೋಚರಿಸದ ಕಾರಣ ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತ ಪಟ್ಟಿದ್ದಾರೆ.
ತಾಲೂಕಿನ ಎಡಮೊಗೆ ಗ್ರಾಮದಲ್ಲಿ ಕಮಲಶಿಲೆ ದೇವಳದ ಅರ್ಚಕ ಶೇಷಾದ್ರಿ ಐತಾಳ್ ( 71) ಕುಬ್ಜಾ ನದಿಯ ತಟದಲ್ಲಿ ಕಾಲು ಸಂಕದಿಂದ ಜಾರಿ ಮೃತಪಟ್ಟಿದ್ದಾರೆ.
ತಾಲೂಕಿನ ವಕ್ವಾಡಿ, ಬೇಳೂರು, ಕೆದೂರು,ಉಳ್ತೂರು,ಮಲ್ಯಾಡಿಯ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನೆರೆಯಿಂದಾಗಿ ಸಾವಿರಾರು ಎಕರೆ ಅಧಿಕ ವಿಸ್ತೀರ್ಣದ ಕೃಷಿ ಭೂಮಿಗಳು ಮುಳುಗಡೆಯಾಗಿದೆ.ತುಂಬಿಕೊಂಡಿದ್ದ ನೆರೆಯಿಂದಾಗಿ ನಾಟಿ ಮಾಡಿದ ಭತ್ತದ ಕೃಷಿ ಸಂಪೂರ್ಣ ಜಲಾವೃತಗೊಂಡಿದೆ.
ಮೊಳಕೆಯೊಡೆಯಬೇಕಾದ ಭತ್ತದ ಬೀಜ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.
ಉಳ್ತೂರು, ಕೆದೂರು, ಮಲ್ಯಾಡಿ, ವಕ್ವಾಡಿ ಪರಿಸರದಲ್ಲಿ ಅಪಾರ ಪ್ರಮಾಣದ ಅಂತರಗಂಗೆ, ಪ್ಲಾಸ್ಟಿಕ್, ಮರದ ದಿಮ್ಮಿ,ಕಸಕಡ್ಡಿಗಳು ತೇಲಿ ಬಂದು ಕೃಷಿ ಭೂಮಿಯಲ್ಲಿ ಶೇಖರಣೆ ಯಾಗಿದ್ದರಿಂದ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತರಿಗೆ ಭಾರಿ ತೊಂದರೆಯಾಗಿದೆ.
ಆನೆಗುಡ್ಡೆಯಿಂದ ಹೂವಿನ ಕೆರೆ ಮಠಕ್ಕೆ ಹೋಗುವ ಮಾರ್ಗದಲ್ಲಿ ವಾರಾಹಿ ನಾಲೆಯ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗೆ ನೀರು ಹರಿದು ಬರುತ್ತಿರುವುದರಿಂದ ಜನರು ತಿರುಗಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಜನರು ಕಾಮಗಾರಿಯ ವಿರುದ್ದ ಆಕ್ರೋಶಗೊಂಡಿದ್ದಾರೆ.