ಕರಾವಳಿ

ಕುಂದಾಪುರ:ಚಪ್ಪಲಿ ಹೊಲಿಯುವವನಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ!

Views: 146

ಕುಂದಾಪುರ: 2024ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗವಹಿಸಲು ಕುಂದಾಪುರದ ಚಮ್ಮಾರ ಮಣಿಕಂಠ ಎಂಬುವವರಿಗೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆಹ್ವಾನ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಚಪ್ಪಲಿಗಳನ್ನು ಹೊಲಿಯುವ ಕೆಲಸ ಮಾಡುತ್ತಿರುವ ಮಣಿಕಂಠ ಅವರು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಹೀಗಾಗಿ, ಅವರಿಗೆ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.

ಮಣಿಕಂಠ ತಮ್ಮ ಕುಟುಂಬ ಹಿಂದಿನಿಂದಲೂ ನಡೆಸಿಕೊಂಡು ಬಂದ ಚಮ್ಮಾರ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ತಂದೆ ಮತ್ತು ಅಜ್ಜ ಇಬ್ಬರೂ ಚಮ್ಮಾರರಾಗಿದ್ದರು. ಅವರು ಹೆಮ್ಮೆಯಿಂದ ಈ ವೃತ್ತಿಯನ್ನು ಪರಂಪರೆಯಂತೆ ನಡೆಸಿಕೊಂಡು ಬಂದಿದ್ದರು. ಅಪ್ಪ ಶುರು ಮಾಡಿದ ಚಪ್ಪಲಿ ಹೊಲಿಯುವ ಅಂಗಡಿಯನ್ನು ಈಗ ಮಣಿಕಂಠ ನಡೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದಲೇ ಮಣಿಕಂಠ ತಮ್ಮ ಇಬ್ಬರು ಮಕ್ಕಳಿಗೆ ಕಾಲೇಜು ಶಿಕ್ಷಣದವರೆಗೂ ಓದಿಸಿದ್ದಾರೆ

ಮೂಲತಃ ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ನಗರವಾದ ಭದ್ರಾವತಿಯವರಾದ ಮಣಿಕಂಠ ಈಗ ಕುಂದಾಪುರದಲ್ಲಿ ನೆಲೆಸಿದ್ದಾರೆ. ಮಣಿಕಂಠ ಅವರು ಕಳೆದ 25 ವರ್ಷಗಳಿಂದ ಚಪ್ಪಲಿ ಮತ್ತು ಛತ್ರಿ ರಿಪೇರಿ ಮಾಡುತ್ತಿದ್ದಾರೆ

ಯಾಕೆ ಈ ಆಹ್ವಾನ ? ಮಣಿಕಂಠನ ಸಾಧನೆಯೇನು?

ಕಷ್ಟ ಪಟ್ಟು ದುಡಿಯುತ್ತಾ ತುಂಬು ಸಂಸಾರವನ್ನು ನಿಭಾಯಿಸುತ್ತಿದ್ದಂತಹ ಮಣಿಕಂಠರವರು ಹಣ ಸಾಲದೇ ಇದ್ದಾಗ ಸಾಲ ಪಡೆಯುತ್ತಿದ್ದರು. ದುಡಿದ ಹಣವೆಲ್ಲವು ಸಾಲ ತೀರಿಸಲು, ಬಡ್ಡಿ ತೀರಿಸಲು ಸರಿಹೊಂದುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಅವರಿಗೆ ಪಿಎಂ ಸ್ವನಿಧಿ (ಬೀದಿ ವ್ಯಾಪಾರಿಗಳಿಗೆ ನೀಡುವ ಸಾಲ) ಯೋಜನೆಯಡಿ 10 ಸಾವಿರ ರು. ಸಾಲ ನೀಡಿತು. ಶೇ.7ರ ಬಡ್ಡಿ ದರದ ಈ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠ 2,500 ರು.ನಂತೆ ಕಟ್ಟಿ ಐದೇ ತಿಂಗಳಲ್ಲಿ ತೀರಿಸಿದರು.

ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದ್ದನ್ನು ಮೆಚ್ಚಿ ಇಲಾಖೆ ಇನ್ನೂ 20 ಸಾವಿರ ರು. ಸಾಲ ನೀಡಿತು. ಅದರಿಂದ ಈ ಮಳೆಗಾಲದಲ್ಲಿ ಬೇಕಾಗುವ ಚಪ್ಪಲಿ ಮತ್ತು ಕೊಡೆಗಳನ್ನು ತಂದು ಮಾರಾಟ ಮಾಡಿ ಯಶಸ್ವಿಯೂ ಆದರು. ಲಾಭವನ್ನೂ ಗಳಿಸಿದರು, ಐದೇ ತಿಂಗಳಲ್ಲಿ ಪೂರ್ತಿ ಸಾಲ ಮರುಪಾವತಿಸಿದರು. ಮಣಿಕಂಠ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಇಲಾಖೆ ಮತ್ತೆ 50 ಸಾವಿರ ರೂ ಸಾಲ ಮಂಜೂರು ಮಾಡಿದೆ.

ಮಣಿಕಂಠ ಹೇಳಿದ್ದೇನು?

ದೆಹಲಿಯ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಮಣಿಕಂಠ ಅವರು ‘ತುಂಬಾ ಸಂತೋಷವಾಗಿದೆ. ನಮ್ಮಂತವರನ್ನು ಕೂಡ ಸರ್ಕಾರವು ಗುರುತಿಸಿ ದೇಶದ ರಾಜಧಾನಿ ದೆಹಲಿಗೆ ಆಹ್ವಾನಿಸುತ್ತದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ. ನಾವು ಪ್ರಧಾನಿ ಮೋದಿ ಅವರಿಗೆ ಎಂದಿಗೂ ಚಿರಋಣಿಯಾಗಿರುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲದೆ ನಮಗೆ ದೊರೆತಂತಹ ಸಾಲ ಕಡಿಮೆ. ಆದರೆ ಬಡ್ಡಿ ಮೊತ್ತವು ಕೂಡ ತುಂಬಾ ಕಡಿಮೆ. ಹಾಗಾಗಿ ನಮ್ಮನ್ನು ನಂಬಿ ಸರ್ಕಾರ ಸಾಲ ನೀಡುತ್ತದೆ. ನಾವು ಕೂಡ ಅದನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕಾಗುತ್ತದೆ. ಅದೇ ರೀತಿ ನಾನು ಒಬ್ಬ ಸಾಮಾನ್ಯನು ಮಾಡುವ ಕೆಲಸವನ್ನು ಮಾಡಿದ್ದೇನೆ. ನನ್ನ ಜವಾಬ್ದಾರಿ ಅದು. ಆದರೆ ಸರ್ಕಾರ ನಮ್ಮನ್ನು ಗುರುತಿಸಿರುವುದು ನಿಜಕ್ಕೂ ಕೂಡ ಸಂತೋಷವಾಗಿದೆ ಎಂದು ಹೇಳಿದ್ದಾರೆ.

 

 

Related Articles

Back to top button