ರಾಜಕೀಯ

ಕಾಂಗ್ರೆಸ್ ಸೇರ್ಪಡೆಗೊಂಡ ಶಿರಹಟ್ಟಿಯ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ

Views: 0

ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಲಕ್ಷ್ಮಣ ಸವದಿ, ಸಚಿವ ಹೆಚ್‌ಕೆ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ರಾಮಪ್ಪ ಲಮಾಣಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಪಕ್ಷದ ಬಾವುಟ ನೀಡಿ ಪಕ್ಷದ ಶಾಲು ಹಾಕುವ ಮೂಲಕ ಲಮಾಣಿಯವರನ್ನು ಡಿಕೆ ಶಿವಕುಮಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಬಳಿಕ ಮಾತನಾಡಿದ ರಾಮಪ್ಪ ಲಮಾಣಿ, ಯಾವುದೇ ಷರತ್ತು ಇಲ್ಲದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಬಿಜೆಪಿಯಲ್ಲಿ ಆಗಿರುವ ನೋವಿನಿಂದ ಆ ಪಕ್ಷವನ್ನು ತೊರೆದಿದ್ದೇನೆ. ಕಾಂಗ್ರೆಸ್ ಪಕ್ಷದ ನಾಯಕರು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ಅವರನ್ನು ಗೆಲ್ಲಿಸಲು ನಾನು ಶ್ರಮಿಸುತ್ತೇನೆ ಎಂದರು.

ಜಗದೀಶ್ ಶೆಟ್ಟರ್ ಹಾಗೂ ಡಿಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕ ಭಾಗದ ಅನೇಕ ನಾಯಕರಿಗೆ ಗಾಳ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಶಾಸಕರು ಕೇವಲ 1,500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲದಿದ್ದರೆ ಬಿಜೆಪಿ 40 ಸ್ಥಾನಗಳಿಗೆ ನಿಲ್ಲುತ್ತಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರೂ ಕೂಡಾ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗಿ ಮಾತು ನೀಡಿದ್ದಾರೆ

ಬಳಿಕ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಸೇರ್ಪಡೆಗೆ 40ಕ್ಕೂ ಹೆಚ್ಚು ನಾಯಕರ ಅರ್ಜಿ ನಮ್ಮ ಮುಂದೆ ಇದೆ. ಸ್ಥಳೀಯ ನಾಯಕರ ಜೊತೆಗೆ ಚರ್ಚೆ ಮಾಡಿ ಸೇರ್ಪಡೆ ಮಾಡುತ್ತೇವೆ. ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೆ ಪಟ್ಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷದವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ. ಆಮ್ ಆದ್ಮಿಯಿಂದ ಕೂಡಾ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಬಿಜೆಪಿ ಒಂದು ಟೀಂ ಸಿನಿಮೀಯ ರೀತಿಯಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ಎಂದರು.

Related Articles

Back to top button